ಮಂಗಳೂರು : ದಕ್ಷಿಣ ಪೊಲೀಸ್ ಠಾಣೆಯಲ್ಲಿ 2013 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್ ಪಿ. ಸಿ ವಾರಂಟ್ ಆರೋಪಿ ಕಾಸರಗೋಡಿನ ಮಂಜೇಶ್ವರ ತಾಲೂಕಿನ ಉಪ್ಪಳ ಪೈವಳಿಕೆ ನಿವಾಸಿ 40 ವರ್ಷ ಪ್ರಾಯದ ಮಹಮ್ಮದ್ ತೌಸಿಫ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಾರಣ ಮಂಗಳೂರಿನ 2 ನೇ ಸಿ.ಜೆ.ಎಂ. ನ್ಯಾಯಾಲಯವು ಆರೋಪಿಯ ವಿರುದ್ಧ ಎಲ್.ಪಿ.ಸಿ. ವಾರಂಟ್ ಜಾರಿ ಮಾಡಿತ್ತು. ಇದೀಗ ಆರೋಪಿಯನ್ನು ಆಗಸ್ಟ್ 29 ರಂದು ಪಾಂಡೇಶ್ವರ ಪೊಲೀಸರು ಮಂಗಳೂರಿನ ಸಿಸಿಬಿ ಪೊಲೀಸರ ಸಹಕಾರದೊಂದಿಗೆ ಪರಂಗಿಪೇಟೆಯಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಆರೋಪಿಗೆ ಸಪ್ಟೆಂಬರ್ 13 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿ ಮಹಮ್ಮದ್ ತೌಸಿಫ್ ಕುಖ್ಯಾತ ಸರಗಳ್ಳತನದ ಆರೋಪಿಯಾಗಿರುವ ಸೈಯದ್ ಸಾಹೀಲ್ ಎಂಬಾತನ ಸಹೋದರನಾಗಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

