ಕಾಯಕವೇ ಕೈಲಾಸವೆಂದು ನಂಬಿರುವ ಪೌರಕಾರ್ಮಿಕ ಸೇಸಪ್ಪ ತಮ್ಮ ಕಾರ್​ ಕ್ರೇಜ್​ನಿಂದಾಗಿ ಹಗಲಿರುಳು ಶ್ರಮಿಸಿ ತಮ್ಮ ಕನಸಿನ ಫಾರ್ಚೂನರ್ ಅನ್ನು 30 ವರ್ಷಗಳ ಕಠಿಣ ದುಡಿಮೆಯಿಂದ ತಮ್ಮದಾಗಿಸಿಕೊಂಡಿದ್ದಾರೆ.

ಬೆಳಗ್ಗೆ 5 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ. ರೋಡ್​ಗೆ ಫಾರ್ಚೂನರ್ ವಾಹನವೊಂದು ಕಳೆದೊಂದು ವಾರದಿಂದ ಸತತವಾಗಿ ಬರುತ್ತಿದೆ. ವಾಹನ ಚಾಲನೆ ಮಾಡುತ್ತಾ ಬರುವ ವ್ಯಕ್ತಿ ವಾಹನವನ್ನು ಪೊಲೀಸ್ ಸ್ಟೇಷನ್ ಹತ್ತಿರ ನಿಲ್ಲಿಸಿ ಕೆಳಗಿಳಿದು ನೇರ ಪೊರಕೆ ತೆಗೆದುಕೊಂಡು ಊರೆಲ್ಲಾ ಸ್ವಚ್ಛ ಮಾಡಲು ಹೊರಡುತ್ತಾರೆ. ಇಡೀ ಬಿ.ಸಿ. ರೋಡಿನ ಪೇಟೆಯ ಸ್ವಚ್ಛತೆ ಮಾಡಿದ ಬಳಿಕ ತನ್ನ ಕರ್ತವ್ಯ ನಿರ್ವಹಿಸಿ, ಮಧ್ಯಾಹ್ನ ಆಗುತ್ತಿದ್ದಂತೆ ಮತ್ತೆ ಅದೇ ವಾಹನದಲ್ಲಿ ತಮ್ಮ ಮನೆಗೆ ಮರಳುತ್ತಾರೆ.

ಇವರು ಬಂಟ್ವಾಳದ ಪೌರಕಾರ್ಮಿಕ ಸೇಸಪ್ಪಣ್ಣ (ಸೇಸಪ್ಪ ನಾವೂರು). ಕಾರುಗಳ ಕುರಿತು ಮೊದಲಿನಿಂದಲೂ ಇದ್ದ ವ್ಯಾಮೋಹ ಅವರನ್ನು ಫಾರ್ಚೂನರ್ ಕಾರು ಖರೀದಿಸುವ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅವರಿಗೆ ಮೊದಲಿನಿಂದಲೂ ಕಾರುಗಳ ಕುರಿತು ಪ್ರೀತಿ. ಹಿಂದೆ ಸೈಕಲ್​ನಲ್ಲಿ ಸಂಚರಿಸುತ್ತಿದ್ದಾಗಲೇ, ಕಾರುಗಳನ್ನು ಖರೀದಿಸಬೇಕು ಎಂಬ ಹಂಬಲವಿತ್ತು. ಸ್ವಲ್ಪ ಹಣ ಕೂಡಿಟ್ಟು ಮಾರುತಿ 800 ಖರೀದಿಸಿದರು. ಬಳಿಕ ಓಮ್ನಿ, ರಿಜ್ಝ್ ತೆಗೆದುಕೊಂಡು ಬಳಿಕ ಒಂದೊಂದಾಗಿ ಮಾರಿದರೂ ತಾನು ಖರೀದಿಸಿದ ಆಲ್ಟೊ ಮತ್ತು ಸ್ಕಾರ್ಪಿಯೋ ಒಟ್ಟಿಗೆ ಇಟ್ಟುಕೊಂಡಿದ್ದರು. ಇದೀಗ ಇವೆರಡನ್ನೂ ಮಾರಿ ಕಳೆದ ಎಂಟು ದಿನಗಳ ಹಿಂದೆ ಫಾರ್ಚೂನರ್ ಕಾರಿನಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಫಾರ್ಚೂನರ್​ ಇದ್ದರೂ ಕಾಯಕ ಮರೆಯದ ಕಾರ್ಮಿಕ:

ಹಾಗೆಂದು ಅವರು ತಮ್ಮ ಕೆಲಸಕ್ಕೆ ವಿದಾಯ ಹೇಳಿಲ್ಲ. ಕಾಯಕವೇ ಕೈಲಾಸ ಎಂದು ನಂಬಿರುವ ಅವರು, ಎಂದಿನಂತೆ ಬೆಳಗ್ಗೆ 5 ಗಂಟೆಗೆ ಬಿ.ಸಿ. ರೋಡಿನ ಕೋರ್ಟ್ ಬಳಿ ಕಾರಿನಲ್ಲಿ ಬಂದು ಬಳಿಕ ಪೊರಕೆ ಹಿಡಿದು ನೇರವಾಗಿ ಸ್ವಚ್ಛತಾ ಕಾರ್ಯಕ್ಕೆ ಇಳಿಯುತ್ತಾರೆ. ಕೃಷಿ, ಹೈನುಗಾರಿಕೆಯನ್ನೂ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸುವ ನಾವೂರು ಮೂಲದ ಸೇಸಪ್ಪ ಅವರು ಕಷ್ಟದ ಹಾದಿಯಲ್ಲೇ ಮುನ್ನಡೆದವರು. ಕಳೆದ ಮೂವತ್ತು ವರ್ಷಗಳಲ್ಲಿ ಅವರು ಮಾಡದ ಕೆಲಸವಿಲ್ಲ. ಯಾವ ಕೆಲಸವೂ ಸಣ್ಣದಲ್ಲ, ಯಾವುದೂ ದೊಡ್ಡದಲ್ಲ ಎಂಬುದೇ ಅವರ ಪಾಲಿಸಿ.

View this post on Instagram

A post shared by News Karnataka (@newskarnataka)