ಬೆಳ್ತಂಗಡಿ : ಮಲವಂತಿಗೆ ಗ್ರಾಮದ ದಿಡುಪೆಯಲ್ಲಿ ಒಂಟಿ ಸಲಗವೊಂದು ದ್ವಿಚಕ್ರ ವಾಹನದ ಮೇಲೆ ಭೀಕರವಾಗಿ ದಾಳಿ ನಡೆಸಿರುವ ಘಟನೆ ಮೇ 31ರ ರವಿವಾರ ರಾತ್ರಿ ಸಂಭವಿಸಿದೆ. ಅದೃಷ್ಟವಶಾತ್ ಸವಾರ ಸಮಯಪ್ರಜ್ಞೆಯಿಂದ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಲವಂತಿಗೆ ಗ್ರಾಮದ ದಿಡುಪೆಯ ನಿವಾಸಿ ನೆಕ್ಕಿಲೊಟ್ಟು ನಾರಾಯಣ ಗೌಡ ಎಂಬವರು ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ರಾತ್ರಿ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಗೆ ವಾಪಸ್ಸು ಹಿಂದಿರುಗುತ್ತಿದ್ದರು. ರಾತ್ರಿ ಅವರು ನೇಲ್ಯಡ್ಕ ರಸ್ತೆ ಬಳಿ ತಲುಪಿದಾಗ, ಕತ್ತಲೆಯಲ್ಲಿ ಇದ್ದಕ್ಕಿದ್ದಂತೆ ಒಂಟಿ ಕಾಡಾನೆಯೊಂದು ಅವರ ಎದುರಿಗೆ ಬಂದಿದೆ. ಏಕಾಏಕಿ ಆನೆಯು ವಾಹನದ ಮೇಲೆ ಎರಗಿದ್ದು, ಸ್ಕೂಟರ್ ಅನ್ನು ಸಂಪೂರ್ಣವಾಗಿ ಜಖಂಗೊಳಿಸಿದೆ.

ವಾಹನ ತೀರಾ ಆನೆಯ ಸಮೀಪ ಬಂದಾಗಲಷ್ಟೇ ನಾರಾಯಣ ಗೌಡರಿಗೆ ಆನೆ ಇರುವುದು ಗಮನಕ್ಕೆ ಬಂದಿದೆ. ತಕ್ಷಣವೇ ತೀವ್ರ ಭಯಭೀತರಾದ ಅವರು ವಾಹನವನ್ನು ಸ್ಥಳದಲ್ಲೇ ಬಿಟ್ಟು, ಪ್ರಾಣಭಯದಿಂದ ದೂರ ಓಡಿದ್ದಾರೆ. ಹೀಗಾಗಿ ಯಾವುದೇ ಗಾಯಗಳಿಲ್ಲದೆ ಆನೆ ದಾಳಿಯಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.