ಮಂಗಳೂರು: ಆಗಸ್ಟ್ 15 ಹಿರಿಯರ ತ್ಯಾಗ ಬಲಿದಾನಗಳ ಪ್ರತೀಕವೇ ನಾವಿಂದು ಆಚರಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆ. ನಾವಿಂದು ವಿಶ್ವಕ್ಕೆ ಮಾದರಿಯಾಗಿದ್ದೇವೆ. ನಾವು ಸಾಗ ಬೇಕಾದ ದಾರಿ ಇನ್ನೂ ಇದೆ. ಹಾಗಾಗಿ ಯುವ ಪ್ರಜೆಗಳಾದ ಇಂದಿನ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ. ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜೋಕಿಮ್ ಸ್ಟ್ಯಾನಿ ಅಲ್ವಾರೆಸ್ ತಿಳಿಸಿದರು.

ಇವರು ಮಂಗಳೂರು ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್ ಹಾಗೂ ಎನ್ ಸಿ ಸಿ ವತಿಯಿಂದ ಮಿಲಾಗ್ರಿಸ್ ವಿದ್ಯಾ ಸಂಸ್ಥೆಗಳ ಕ್ಯಾಂಪಸ್ ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮಿಲಾಗ್ರಿಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂದ. ಗುರು. ಡಾ.ಮೈಕಲ್
ಸಾಂತುಮಾಯೋರ್ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ “ಸ್ವಾತಂತ್ರ್ಯ ಹೋರಾಟಗಾರರ ಮಹಾನ್ ಆದರ್ಶ, ಮೌಲ್ಯ, ಹಾಗೂ ತ್ಯಾಗಗಳು” ಎಂದಿಗೂ ಮಾದರಿ ಎಂದರು.

ನಂತರ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ಮಂಗಳೂರಿನ ನಗರದ ಸುತ್ತ ಮುತ್ತ ಸ್ವಚ್ಚತಾ ಅಭಿಯಾನ ನಡೆಯಿತು. ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀಯುತ ಮೆಲ್ವಿನ್, ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ವಂದ ಗುರು. ಉದಯ ಫೆರ್ನಾಂಡಿಸ್, ಎನ್ ಸಿ ಸಿ ವಿಭಾಗ ಸಂಯೋಜಕರಾದ ಡೆನ್ಜಿಲ್ ಪಿಂಟೋ, ಹಾಗೂ ಮಿಲಾಗ್ರಿಸ್ ವಿದ್ಯಾ ಸಂಸ್ಥೆಗಳ ಉಪನ್ಯಾಸಕರು, ಶಿಕ್ಷಕರು ಹಾಗೂ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅನಿತಾ ಲೋಬೊ ಸ್ವಾಗತಿಸಿದರು, ಉಪನ್ಯಾಸಕಿ ಕುಮಾರಿ ಟ್ರೆಸ್ಸಿ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೇಷ್ಮಾ ಕೆ ಎಂ ವಂದಿಸಿದರು.


