ಮಂಗಳೂರು : ರೈಲ್ವೇ ಲೆವೆಲ್ ಕ್ರಾಸಿಂಗ್ ಗೇಟ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗ ಗಂಭೀರವಾಗಿ ಪರಿಗಣಿಸಿದ್ದು, ಕಠಿನ ಕ್ರಮಕ್ಕೆ ಮುಂದಾಗಿದೆ.
ರಸ್ತೆ ಬಳಕೆದಾರರ ನಿರ್ಲಕ್ಷ್ಯದಿಂದಾಗಿ ಅಪಘಾತಗಳು ಹೆಚ್ಚುತ್ತಿವೆ. 2025 ಮತ್ತು 2026 ರ ಅವಧಿಯಲ್ಲಿ ಒಟ್ಟು 79 ಲೆವೆಲ್ ಕ್ರಾಸಿಂಗ್ ಗೇಟ್ ಅಪಘಾತಗಳು ಸಂಭವಿಸಿವೆ. 2025ರಲ್ಲಿ 55 ಪ್ರಕರಣಗಳು ಮತ್ತು 2026 ರಲ್ಲಿ 24 ಪ್ರಕರಣಗಳು ನಡೆದಿವೆ.
ಎಚ್ಚರಿಕೆ ಸಂಕೇತಗಳು ಅಥವಾ ಗೇಟ್‌ಗಳನ್ನು ಮುಚ್ಚಿದ್ದರೂ ರಸ್ತೆ ಬಳಕೆದಾರರು ರೈಲ್ವೇ ಹಳಿಗಳನ್ನು ದಾಟಲು ಪ್ರಯತ್ನಿಸಿದಾಗ ಈ ಹೆಚ್ಚಿನ ಘಟನೆಗಳು ಸಂಭವಿಸಿವೆ. ಇದು ಅವರ ಸ್ವಂತ ಜೀವಕ್ಕೆ ಮಾತ್ರವಲ್ಲದೆ ರೈಲು ಕಾರ್ಯಾಚರಣೆಯ ಸುರಕ್ಷೆಗೂ ಧಕ್ಕೆ ತಂದಿದೆ.
ಈ ಹಿನ್ನೆಲೆಯಲ್ಲಿ, ಅಪರಾಧ ಎಸಗಿದ ಆರು ಚಾಲಕರ ಚಾಲನ ಪರವಾನಿಗೆಯನ್ನು ಸಕ್ಷಮ ಅಧಿಕಾರಿ ಗಳು ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಿದ್ದಾರೆ. ಇನ್ನುಳಿದ ಪ್ರಕರಣಗಳು ವಿವಿಧ ಹಂತದ ಪ್ರಕ್ರಿಯೆಯಲ್ಲಿವೆ.
2025-26ರ ಆರ್ಥಿಕ ವರ್ಷದಲ್ಲಿ, ಲೆವೆಲ್ ಕ್ರಾಸಿಂಗ್ ಗೇಟ್‌ಗಳಿಗೆ ತಮ್ಮ ವಾಹನಗಳನ್ನು ಢಿಕ್ಕಿ ಹೊಡೆಸಿ ರೈಲ್ವೇ ಆಸ್ತಿಗೆ ಹಾನಿ ಉಂಟು ಮಾಡಿದವರಿಂದ ಒಟ್ಟು 17,27,659 ರೂ. ವಸೂಲಿ ಮಾಡಲಾಗಿದೆ. ಎಲ್ಲ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸ ಲಾಗಿದೆ ಎಂದು ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.

