ಮಂಗಳೂರು: ಟೀಮ್ ಸತ್ಯಜಿತ್ ಸುರತ್ಕಲ್ ವತಿಯಿಂದ 2ನೇ ವರ್ಷದ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣೆ, ದಂತ ಚಿಕಿತ್ಸಾ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಮಂಗಳೂರಿನ ಕಂಕನಾಡಿ ಸಮೀಪದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಎರಡನೇ ವರ್ಷದ ಈ ಸಮಾಜಮುಖಿ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಿನಕರ್ ಶೆಟ್ಟಿ, ಶೈಲೇಂದ್ರ ಸುವರ್ಣ, ರಾಜೇಶ್ ಬೊಲ್ಲುಕಲ್ಲು, ಸತ್ಯಜಿತ್ ಸುರತ್ಕಲ್, ಜಗದೀಶ್, ಜುನೈದ್, ಅಂಜಲಿ, ಅನಿಲ್ ಕುಮಾರ್, ಗೋಪಾಲ್ ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ದಿನಕರ್ ಶೆಟ್ಟಿ, ಟೀಮ್ ಸತ್ಯಜಿತ್ ಸುರತ್ಕಲ್ ವತಿಯಿಂದ ನಡೆಯುತ್ತಿರುವ ವಿವಿಧ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಸತ್ಯಜಿತ್ ಸುರತ್ಕಲ್, “ನನ್ನ ಮೇಲೆ ಅಭಿಮಾನವಿಟ್ಟು, ಯಾವುದೇ ಅಧಿಕಾರ ಅಥವಾ ಸ್ಥಾನಮಾನವನ್ನು ನಿರೀಕ್ಷಿಸದೆ, ತಮ್ಮ ಸ್ವಂತ ಖರ್ಚಿನಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಿರುವ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಮುಂದೆಯೂ ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಲಿ” ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ರಕ್ತದಾನ, ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಸೇವೆಗಳ ಮೂಲಕ ಸಾರ್ವಜನಿಕರಿಗೆ ನೆರವಾಗುವ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

