ಮಂಡ್ಯ: ಕೆ.ಆರ್.ಪೇಟೆ ತಾ| ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಸ್ವತಂತ್ರ ಪದವೀ ಪೂರ್ವ ಕಾಲೇಜು ಸುತ್ತಲೂ ಗಿಡ ಗೆಡ್ಡೆಯ ಬಳ್ಳಿಗಳು ಬೆಳೆದು ವಿಷ ಜಂತುಗಳ ಇಲಿ ಹೆಗ್ಗಣಗಳು ವಾಸಿಸುವ ಸ್ಥಳವಾಗಿ.ಶೀತಲಗೊಂಡು ಭೂತ ಬಂಗಲೆಯೂ ಕೂಡ ನಾಚುವ ರೀತಿಯಲ್ಲಿ ಕೈಗನ್ನಡಿಯಾಗಿ ನಿಂತಿದೆ.

ಕಾಲೇಜಿನ ವ್ಯವಸ್ಥೆಯ ಕಂಡು ಮುಖಂಡ ಸೋಮನಹಳ್ಳಿ ಮದನ್ ಮಾತನಾಡಿ, 15 ವರ್ಷಗಳ ಹಿಂದೆ ಪಟ್ಟಣದಿಂದ 20ಕ್ಕೂ ಹೆಚ್ಚು ಕಿಲೋಮೀಟರ್ ದೂರವಿರುವ ತಾಲೂಕಿನ ಗಡಿ ಭಾಗವಾದ ನಮ್ಮ ಗ್ರಾಮ ಈ ಸುತ್ತ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಮುಖ್ಯ ಕೇಂದ್ರ ಬಿಂದು ಅದನ್ನು ಪರಿಗಣಿಸಿ ಆ ಸಂದರ್ಭದಲ್ಲಿದ್ದ ಸರ್ಕಾರ ಈ ಭಾಗದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅದರಲ್ಲೂ ಮಹಿಳಾ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ನಿರ್ಮಾಣವಾಗಿತ್ತು ಎಂಬ ಹೆಗ್ಗಳಿಕೆ ಇದ್ದರೂ ಪ್ರಸ್ತುತ ದಿನಗಳಲ್ಲಿ ಕಾಲೇಜಿನ ಅವ್ಯವಸ್ಥೆಯ ನೋಡುತ್ತಿದ್ದರೆ ನಮಗೆ ಮತ್ತು ಗ್ರಾಮದ ಜನತೆಗೆ ನಾಚಿಕೆಯಾಗುತ್ತಿದೆ.

ಮೊದಲೇ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿರುವ ಸರ್ಕಾರಿ ಶಾಲಾ ಮತ್ತು ಕಾಲೇಜುಗಳು ಎಂದರೆ ಸ್ವಚ್ಛತೆ ಇಲ್ಲ ಮತ್ತು ಗುಣಮಟ್ಟದ ಶಿಕ್ಷಣವಿಲ್ಲವೆಂದು ಕೆಲ ಪೋಷಕರು ಭಾವಿಸುತ್ತಾ ಖಾಸಗಿ ಶಾಲಾ ಕಾಲೇಜುಗಳತ್ತ ಮುಖ ಮಾಡುತ್ತಾರೆ ಇಂತಹ ಸಂದರ್ಭದಲ್ಲಿ ಈ ಘಟನೆಗೆ ಮತ್ತಷ್ಟು ಪುಷ್ಟಿ ನೀಡುವಂತೆ. ನಮ್ಮ ಕಾಲೇಜಿನ ಪ್ರಾಂಶುಪಾಲ ಬೇಜವಾಬ್ದಾರಿತನದಿಂದ ದಾಖಲಾತಿ ಪ್ರಾರಂಭವಾಗುವ ಸಮಯದಲ್ಲಿ ಸ್ವಚ್ಛತೆ ಮತ್ತು ಶಿಸ್ತು ಪಾಲನೆ ಮಾಡಲಿಲ್ಲ ಎಂದರೆ ಈ ಅವ್ಯವಸ್ಥೆಗಳ ಸರಮಾಲೆಗಳನ್ನ ಕಂಡರೂ ಕಾಣದ ರೀತಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸುತ್ತಾರಾ ಎಂಬುವ ಪ್ರಶ್ನೆ ನಮ್ಮಲ್ಲಿ ಹಾಗೂ ಪ್ರಜ್ಞಾವಂತ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಗ್ರಾಮದಲ್ಲಿರುವ ಕಾಲೇಜಿನ ಅವ್ಯವಸ್ಥೆಯಿಂದ ಮುಕ್ತಿಗೊಳಿಸಿ ಸೂಕ್ತ ಕಾಳಜಿ ವಹಿಸುವ ಪ್ರಾಂಶುಪಾಲರನ್ನು ನೇಮಿಸಿ ಈ ಭಾಗದ ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.


