ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಹಾಗೂ ಪತ್ತೆ ಪ್ರಕರಣ ವರದಿಯಾದ ಹಿನ್ನೆಲೆ ಪಾಂಡವಪುರ ತಾಲ್ಲೂಕು ಆಡಳಿತ ಎಚ್ಚೆತ್ತಿದೆ.ತಾಲ್ಲೂಕು ಖಾಸಗೀ ಆಸ್ಪತ್ರೆಗಳು ಹಾಗೂ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಾಂಡವಪುರ ತಹಶೀಲ್ದಾರ್ ಬಸವರೆಡ್ಡಪ್ಪ ರೋಣ ನೇತೃತ್ವದಲ್ಲಿ ಭೇಟಿ ನೀಡಿದ್ದಾರೆ.ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಯುತ್ತಿದೆ.
ಪಟ್ಟಣದ ಖಾಸಗಿ ಶ್ರೀ ಕ್ಲಿನಿಕ್, ಬಾಬು ಹಾಸ್ಪಿಟಲ್, ಇತಿಹಾಸ್ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ರಿಜಿಸ್ಟರ್ ಹಾಗೂ ಸ್ಕ್ಯಾನಿಂಗ್ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಭ್ರೂಣ ಹತ್ಯೆ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ.
ಕ್ಲಿನಿಕ್ ಅಥವಾ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಭ್ರೂಣಲಿಂಗ ಪತ್ತೆ ಮಾಡುವುದನ್ನ ನಿಷೇಧ ಮಾಡಲಾಗಿದೆ. ಇದು ಗಂಭೀರ ಅಪರಾಧವಾಗಿದೆ. ತಾಲೂಕು ಮಟ್ಟದ ಸಮಿತಿ ರಚನೆಯಾಗಿದೆ.
ಮೂರು ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಅಕ್ರಮವಾಗಿ ಭ್ರೂಣ ಪತ್ತೆ, ಹತ್ಯೆ ಪ್ರಕರಣ ಸಂಬಂಧ ಎಚ್ಚರಿಕೆ ವಹಿಸಲಾಗಿದೆ.
ಯಾವುದೇ ರೀತಿಯ ಹೆಣ್ಣು ಭ್ರೂಣ ಹತ್ಯೆ, ಪತ್ತೆ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ವಹಿಸಲಾಗುತ್ತದೆ ಎಂಬ ಎಚ್ಚರಿಕೆ ಕೊಟ್ಟಿದ್ದಾರೆ. ನಿಯಮಾನುಸಾರ ತಾಲೂಕಿನ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ.
ವೈದ್ಯರು ಹಾಗೂ ಸಿಬ್ಬಂದಿಗೆ ಹೆಣ್ಣು ಭ್ರೂಣ ಹತ್ಯೆಯ ಕಾನೂನು ಹಾಗೂ ಶಿಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಹೆಣ್ಣು ಮಗುವಿನ ಮಹತ್ವವನ್ನು ವಿವರಿಸಿ ಜಾಗೃತಿ ಮೂಡಿಸಲಾಗಿದೆ. ಯಾವುದೇ ಅನುಮಾನಾಸ್ಪದ ಬಾಲ್ಯ ವಿವಾಹ ಮತ್ತು ಹೆಣ್ಣು ಭ್ರೂಣ ಹತ್ಯೆ ಚಟುವಟಿಕೆಗಳ ಬಗ್ಗೆ. ಸಮೀಪದ ಪೊಲೀಸ್ ಠಾಣೆ, ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

