ಮಂಡ್ಯ: ಕಂಪನಿಯೊಂದರಲ್ಲಿ ಕೆಲಸ ಎಂದು ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ನಿರುದ್ಯೋಗಿ ಎಂದು ತಿಳಿದ ನಂತರ ಮನನೊಂದ ಯುವತಿ ತಾನು ಕೆಲಸ ಮಾಡುವ ಕಚೇರಿಯಲ್ಲಿ ವಿಷದ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ನಡೆದಿದೆ.

ಕೆ.ಆರ್.ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದ ಕಾವ್ಯ (26) ಮೃತ ದುರ್ದೈವಿ. ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಕಾವ್ಯ ತನ್ನ ಸಹೋದರರಿಗೆ ಮೊಬೈಲ್ ನಲ್ಲಿ ಮೆಸೇಜ್ ಮಾಡಿ ವಿಷದ ಮಾತ್ರೆ ಸೇವಿಸಿದ್ದಾಳೆ.

ಈಕೆಗೆ 15 ದಿನಗಳ ಹಿಂದೆ ಹಾಸನದ ಕಿರಣ್ ಎಂಬ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿತ್ತು. ಖಾಸಗಿ ಕಂಪನಿ ಉದ್ಯೋಗಿ ಎಂದು ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದ. ನಂತರ ಹುಡುಗನಿಗೆ ಯಾವುದೇ ಕೆಲಸ ಇಲ್ಲವೆಂದು ಖಚಿತವಾಗಿದೆ. ಇದರಿಂದ ಕಾವ್ಯ ಮನನೊಂದಿದ್ದಳು. ಮನೆಯವರು ಧೈರ್ಯ ಹೇಳಿದ್ದರು.

ಎಂದಿನಂತೆ ಕಚೇರಿಗೆ ಬಂದ ಕಾವ್ಯ ಧಾನ್ಯಗಳಿಗೆ ಬಳಸುವ ಕ್ರಿಮಿನಾಶಕ ಮಾತ್ರೆಗಳನ್ನ ಸೇವಿಸಿ ತನ್ನ ಸಹೋದರರಿಗೆ ಮೆಸೇಜ್ ಮಾಡಿದ್ದಾಳೆ. ಅಸ್ವಸ್ಥಳಾದ ಕಾವ್ಯಳನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಚಿಕಿತ್ಸೆ ಫಲಕಾರಿಯಾಗದೆ ಕಾವ್ಯ ಸಾವನ್ನಪ್ಪಿದ್ದಾಳೆ. ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.