ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್​ಗೇಟ್ ತುಂಡಾಗಿ ನೀರುಪೋಲಾಗುತ್ತಿರುವ ಕಾರಣ ಸದ್ಯ ತಾತ್ಕಾಲಿಕ ಗೇಟ್ ಅಳವಡಿಕೆಗೆ ತುಂಗಭದ್ರಾ ಡ್ಯಾಮ್​​​​ ಮಂಡಳಿ ನಿರ್ಧಾರ ಕೈಗೊಂಡಿದೆ. 19ನೇ ಕ್ರಸ್ಟ್ ಗೇಟ್​ಗೆ ತಾತ್ಕಾಲಿಕ ಗೇಟ್​​​​ ಅಳವಡಿಕೆ ಕಾರ್ಯ ಇಂದು (ಮಂಗಳವಾರ) ಸಂಜೆಯಿಂದ ಆರಂಭವಾಗಲಿದೆ.

ಜಲಾಯಶಯದ ನೀರು ಖಾಲಿಯಾಗುವ ಮೊದಲೇ ತಾತ್ಕಾಲಿಕ ಗೇಟ್​ ಅಳವಡಿಕೆಗೆ ಯತ್ನಿಸಲಾಗುತ್ತಿದೆ. ನೀರಿನಲ್ಲೇ ಗೇಟ್​​ ಇಳಿಸಿ ತಾತ್ಕಾಲಿಕ ಗೇಟ್ ಅಳವಡಿಕೆಗೆ ತಜ್ಞರ ತಂಡ ಪ್ರಯತ್ನಿಸಲಿದೆ. ತಾತ್ಕಾಲಿಕ ಹೊಸ ಗೇಟ್ ಹೊಸಪೇಟೆ ಮತ್ತು ಹೊಸಳ್ಳಿಯಲ್ಲಿ ತಯಾರಾಗಿದೆ.​​​​ನಾರಾಯಣ ಇಂಜಿನಿಯರ್ಸ್​, ಹಿಂದೂಸ್ತಾನ್ ಇಂಜಿನಿಯರ್ಸ್​, ಜಿಂದಾಲ್​ ತಂತ್ರಜ್ಞರ ತಂಡದಿಂದ ಗೇಟ್ ಅಳವಡಿಕೆ ಕೆಲಸ ನಡೆಯಲಿದೆ. ಗೇಟ್​ ಅಳವಡಿಕೆ ಯಶಸ್ವಿಯಾದರೆ ಅಪಾರ ಪ್ರಮಾಣದ ನೀರು ಉಳಿಯಲಿದೆ. ಹೀಗಾಗಿ ತಾತ್ಕಾಲಿಕ ಹೊಸ ಗೇಟ್​ ಅಳವಡಿಕೆಗೆ ಡ್ಯಾಮ್​ ಮಂಡಳಿ ಮುಂದಾಗಿದೆ.

ತುಂಗಭದ್ರಾ ಡ್ಯಾಮ್​ನ 19ನೇ ಕ್ರಸ್ಟ್ ಗೇಟ್ ತುಂಡಾಗಿ ಎರಡು ದಿನದಲ್ಲಿ 14 ಟಿಎಂಸಿ ನೀರು ಹೊರಕ್ಕೆ ಹರಿದುಹೋಗಿದೆ. ಆಗಸ್ಟ್ 10ರಂದು ಡ್ಯಾಮ್​ನಲ್ಲಿ ಬರೋಬ್ಬರಿ 105 ಟಿಎಂಸಿ ನೀರು ಸಂಗ್ರಹವಿತ್ತು. ಈ ಜಲಾಶಯ 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ ಡ್ಯಾಂನಲ್ಲಿ 91.979 ಟಿಎಂಸಿ ನೀರು ಸಂಗ್ರಹ ಇದೆ.