ಕೊಪ್ಪಳ: ಹೆತ್ತ ತಂದೆ ಹಾಗೂ ಒಡಹುಟ್ಟಿದ ಅಕ್ಕನನ್ನೇ ಯುವಕನೊಬ್ಬ ಚಾಕುವಿನಿಂದ ಇರಿದು ಅತ್ಯಂತ ಹತ್ಯೆಗೈದಿರುವ ಘಟನೆ ಗಂಗಾವತಿ ತಾಲೂಕಿನ ಹೊಸ ಅಯೋಧ್ಯಾ ಗ್ರಾಮದಲ್ಲಿ ನಡೆದಿದೆ

ಹೊಸ ಅಯೋಧ್ಯಾ ಗ್ರಾಮದ ನಿವಾಸಿಯಾದ ಸಾಯಿಮಣಿ ಎಂಬ ಯುವಕನೇ ತನ್ನ ಸ್ವಂತ ಕುಟುಂಬದವರ ಮೇಲೆಯೇ ಮರಣಾಂತಿಕ ದಾಳಿ ನಡೆಸಿದ ನರಹಂತಕ. ಈತನ ದಾಳಿಗೆ ತಂದೆ ವೆಂಕಟನಾಯ್ಡು (45) ಹಾಗೂ ಅಕ್ಕ ಪ್ರಗತಿ (19) ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ.

ದಾಳಿಯ ವೇಳೆ ತಾಯಿ ಸೌಜನ್ಯ ಅವರಿಗೂ ಗಂಭೀರ ಗಾಯಗಳಾಗಿದ್ದು, ಸದ್ಯ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ ಬಳಿಕ ಆರೋಪಿ ಸಾಯಿಮಣಿ ತನಗೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆರೋಪಿ ಸಾಯಿಮಣಿ ತೀವ್ರವಾಗಿ ಆನ್‌ಲೈನ್ ಗೇಮ್‌ಗಳಿಗೆ ದಾಸನಾಗಿದ್ದ ಎನ್ನಲಾಗಿದೆ. ಆನ್‌ಲೈನ್ ಆಟಗಳಲ್ಲಿ ಭಾರಿ ಪ್ರಮಾಣದ ಹಣವನ್ನು ಕಳೆದುಕೊಂಡಿದ್ದ ಈತ, ಇದೇ ವಿಚಾರವಾಗಿ ಮನೆಯಲ್ಲಿ ಗಲಾಟೆ ಮಾಡಿಕೊಂಡು, ಖಿನ್ನತೆ ಅಥವಾ ಆಕ್ರೋಶದಿಂದ ಈ ಘೋರ ಕೃತ್ಯ ಎಸಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಗಂಭೀರವಾಗಿ ಗಾಯಗೊಂಡಿರುವ ತಾಯಿ ಸೌಜನ್ಯ ಹಾಗೂ ಆರೋಪಿ ಸಾಯಿಮಣಿ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.