ಕೊಪ್ಪಳ : ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ರಸ್ತೆಗೆ ಉರುಳಿಬಿದ್ದಿದ್ದ ಬೇವಿನ ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಕಾಮನೂರ ಗ್ರಾಮದ ಬಳಿ ಇಂದು ಬೆಳಗಿನ ಜಾವ ಸಂಭವಿಸಿದೆ. ಅಪಘಾತದಲ್ಲಿ ಮತ್ತೊಬ್ಬ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ.

ಕಿರಣ್ ಕರಬಡಗಿ (30) ಮೃತಪಟ್ಟ ದುರ್ದೈವಿ. ಇವರೊಂದಿಗೆ ಬೈಕ್‌ನಲ್ಲಿದ್ದ ಮತ್ತೊಬ್ಬ ಯುವಕ ಮಹೇಶ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಹೇಶ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ.

ಭಾನುವಾರ ಮುಂಜಾನೆ ಸುಮಾರು 5 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಯುವಕರಿಬ್ಬರು ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಗೆ ಕೆಲಸದ ನಿಮಿತ್ತ ಹೊರಟಿದ್ದರು. ಯೋಜನೆಯ ಪ್ರಕಾರ ಕಿರಣ್ ಮತ್ತು ಮಹೇಶ್ ಇಬ್ಬರೂ ಮೊದಲು ಬೈಕ್ ಮೂಲಕ ಕಾಮನೂರಿನಿಂದ ಗಿಣಿಗೇರಿಗೆ ತಲುಪಬೇಕಿತ್ತು.

ಅಲ್ಲಿಂದ ಮುಂದೆ ಮರಿಯಮ್ಮನಹಳ್ಳಿಗೆ ತೆರಳುವ ಕ್ರಷರ್ ವಾಹನವೊಂದನ್ನು ಹತ್ತಿ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದರು. ಭಾರಿ ಮಳೆ, ಕೆಲಸಕ್ಕೆ ಹೊರಟಿದ್ದ ಯುವಕನ ಬದುಕನ್ನೇ ಕಸಿದುಕೊಂಡಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.