ಕೋಲಾರ: ಅಪ್ರಾಪ್ತ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ದೊಡ್ಡಕಾರಿ ಗ್ರಾಮದಲ್ಲಿ ನಡೆದಿದೆ. ಯುವಕನೊಬ್ಬನ ನಿರಂತರ ಕಿರುಕುಳವೇ ಈ ದುಡುಕಿನ ನಿರ್ಧಾರಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಮೃತ ಬಾಲಕಿಯನ್ನು (16) ಜೀವಿತಾ ಎಂದು ಗುರುತಿಸಲಾಗಿದೆ. ಅದೇ ಭಾಗದ ಶಫಿ ಎಂಬ ಯುವಕನು ಬಾಲಕಿಯ ಬೆನ್ನುಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ತಾನು ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಆಕೆಯ ಪೋಷಕರಿಗೂ ಹೆದರಿಸಿ, ಧಮ್ಕಿ ಹಾಕಿದ್ದ ಎಂದು ತಿಳಿದುಬಂದಿದೆ. ಯುವಕನ ಈ ವರ್ತನೆ ಹಾಗೂ ಕಿರುಕುಳದಿಂದ ತೀವ್ರ ಮನನೊಂದಿದ್ದ ಅಪ್ರಾಪ್ತೆಯು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಬೇತಮಂಗಲ ಪೊಲೀಸ್ ಠಾಣೆಯ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ

