ಕೋಲಾರ: ಪತಿಯ ಅಗಲಿಕೆಯ ದುಃಖ ತಾಳಲಾರದೆ ಇಬ್ಬರು ಕರುಳ ಕುಡಿಗಳನ್ನು ಕೊಂದು ತಾಯಿಯೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆಲಂಗೂರು ಗ್ರಾಮದಲ್ಲಿ ನಡೆದಿದೆ.

ಆಂಧ್ರಪ್ರದೇಶದ ವಿನಾಯಕಪುರಂ ನಿವಾಸಿಗಳಾದ ಬಾಬು ಮತ್ತು ಬುಜ್ಜಮ್ಮ (22) ದಂಪತಿ ಕಳೆದ ಒಂದು ವರ್ಷದಿಂದ ಆಲಂಗೂರಿನ ಮಾವಿನ ತೋಪಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ ಮೂರು ವರ್ಷದ ಸರಸ್ವತಿ ಹಾಗೂ ಒಂದು ವರ್ಷದ ಹೇಮಾಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು.

ಕೇವಲ ಇಪ್ಪತ್ತು ದಿನಗಳ ಹಿಂದೆಯಷ್ಟೇ ಪತಿ ಬಾಬು ರಸ್ತೆ ಅಪಘಾತವೊಂದರಲ್ಲಿ ದುರ್ಮರಣಕ್ಕೀಡಾಗಿದ್ದರು. ಪತಿಯ ಹಠಾತ್ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದ ಬುಜ್ಜಮ್ಮ ತೀವ್ರ ಮಾನಸಿಕ ಖಿನ್ನತೆಗೆ ಜಾರಿದ್ದರು. ಪತಿಯಿಲ್ಲದ ಜೀವನ ತನಗೆ ಬೇಡ ಎಂದು ಭಾವಿಸಿದ ಆಕೆ, ತನ್ನ ಸಾವಿನ ನಂತರ ಮಕ್ಕಳ ಗತಿ ಏನು ಎಂಬ ಆತಂಕದಲ್ಲಿ ಇಬ್ಬರು ಕರುಳ ಕುಡಿಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಮಕ್ಕಳ ಪ್ರಾಣ ಪಕ್ಷಿ ಹಾರಿದ ಬಳಿಕ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಅದೇ ಸಮಯಕ್ಕೆ ಗಮನಿಸಿದ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಭೀಕರ ಘಟನೆಗೆ ಸಂಬಂಧಿಸಿದಂತೆ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.