ಚಿಂತಾಮಣಿ: ರಸ್ತೆ ದಾಟುತ್ತಿದ್ದ ವೃದ್ಧೆಗೆ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ಚಿಂತಾಮಣಿ- ಕೋಲಾರ ರಸ್ತೆಯ ಕುರುಬೂರು ಗೇಟ್ ಬಳಿ ನಡೆದಿದೆ.
ತಾಲ್ಲೂಕಿನ ನೆಲಮಾಚನಹಳ್ಳ ಗ್ರಾಮದ ವೆಂಕಟಮ್ಮ (65) ಮೃತಪಟ್ಟ ಮಹಿಳೆ. ಕೋಲಾರ ತಾಲ್ಲೂಕಿನ ಬೆಳಗಾನಹಳ್ಳಿಯಲ್ಲಿರುವ ಮಗಳ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು.
ಯಾವುದೋ ಕಾರಣದಿಂದ ಕುರುಬೂರು ಬಳಿ ಇಳಿದುಕೊಂಡು ಮತ್ತೆ ಸ್ವಗ್ರಾಮಕ್ಕೆ ವಾಪಸ್ ಬರಲು ರಸ್ತೆ ದಾಟುತ್ತಿದ್ದಾಗ, ಕೋಲಾರ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಬಂದ ಕಾರು ವೃದ್ಧೆಗೆ ಡಿಕ್ಕಿ ಹೊಡೆದಿದೆ.
ರಸ್ತೆಯಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಸ್ಥಳೀಯರು ಆಂಬುಲೆನ್ಸ್ ಮೂಲಕ ನಗರದ ಸಾರ್ವಜನಿಕ ಅಸ್ಪತ್ರೆಗೆ ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಮೃತರ ಮಗ ಮಂಜುನಾಥ್ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

