ಕೊಡಗಿನಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಕಾಡು, ನಾಡು, ತೋಟ ಎನ್ನದೆ ಎಲ್ಲೆಂದರಲ್ಲಿ ನುಗ್ಗುತ್ತಿದ್ದು, ಇದೀಗ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯನವರ ಕೋಣನಕಟ್ಟೆ ನಿವಾಸಕ್ಕೆ ನುಗ್ಗುವ ಮೂಲಕ ಇನ್ನಷ್ಟು ಭಯ ಹುಟ್ಟಿಸಿದೆ.

ಅಡ್ಡಾಡುತ್ತಾ ಬಂದ ಕಾಡಾನೆ ಅರುಣ್ ಮಾಚಯ್ಯ ಅವರ ಕೋಣನಕಟ್ಟೆ ನಿವಾಸಕ್ಕೆ ಮುಂಜಾನೆ ಸಮಯದಲ್ಲಿ ನುಗ್ಗಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯ ಮುಂಭಾಗದ ಕಡೆಯಿಂದ ಬಂದು ಹಿಂಭಾಗಕ್ಕಾಗಿ ಮನೆಗೆ ಸುತ್ತು ಹಾಕಿದೆ. ಮುಂಜಾನೆ ಸುಮಾರು 3ಗಂಟೆ ಸಮಯವಾದ ಕಾರಣ ಯಾರೂ ಇರಲಿಲ್ಲ. ಹೀಗಾಗಿ ಮನೆ ಬಳಿ ಅಡ್ಡಾಡಿದ ಕಾಡಾನೆ ಮನೆಯ ಮುಂದೆ ಇರಿಸಿದ್ದ ಹೂ ಕುಂಡಗಳನ್ನು ಧ್ವಂಸ ಮಾಡಿದ್ದಲ್ಲದೆ, ಹಿಂಭಾಗಕ್ಕೆ ತೆರಳಿ ಅಲ್ಲಿ ಇರಿಸಲಾಗಿದ್ದ ಹಲಸಿನಕಾಯಿಯನ್ನು ತಿನ್ನಲು ಕಿಟಕಿಯ ಮೂಲಕ ಪ್ರಯತ್ನಿಸಿ ಸಾಧ್ಯವಾಗದೆ ಹಿಂತಿರುಗಿದೆ.

ಇದೀಗ ಈ ಭಾಗದಲ್ಲಿ ಕಾಫಿ ಕೊಯ್ಲು ಆರಂಭವಾಗಿದ್ದು, ಈ ಸಮಯದಲ್ಲಿ ಕಾಡಾನೆಗಳು ಎಲ್ಲೆಂದರಲ್ಲಿ ಓಡಾಡುತ್ತಿರುವುದು ಕಾಫಿ ಬೆಳೆಗಾರರನ್ನು ಕಂಗೆಡಿಸಿದೆ. ಕಾಫಿ ಹಣ್ಣಾಗಿದ್ದು, ಕಾಡಾನೆಗಳು ತೋಟದೊಳಗೆ ನುಗ್ಗಿದರೆ ಫಸಲನ್ನು ನಾಶ ಮಾಡುವುದಲ್ಲದೆ, ಕಾರ್ಮಿಕರ ಮೇಲೆ ಯಾವಾಗ ದಾಳಿ ಮಾಡಿ ಬಿಡುತ್ತವೆಯೇನೋ? ಎಂಬ ಭಯವೂ ಕಾಡಲಾರಂಭಿಸಿದೆ.

ಇನ್ನು ಕಾಡಾನೆ ಅಡ್ಡಾಡುವ ವಿಷಯ ತಿಳಿದ ಕಾರ್ಮಿಕರು ಜೀವಭಯದಲ್ಲಿ ಕೆಲಸ ಮಾಡುತ್ತಿದ್ದು, ಕೆಲವರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳು ಅರಣ್ಯವನ್ನು ಬಿಟ್ಟು ನೇರವಾಗಿ ಕಾಫಿ ತೋಟಗಳಿಗೆ ನುಗ್ಗುತ್ತಿದ್ದು ಅಲ್ಲಿಂದ ಪಟ್ಟಣಕ್ಕೂ ಲಗ್ಗೆಯಿಡುತ್ತಿವೆ. ಅಲ್ಲದೆ ಎಲ್ಲೆಂದರಲ್ಲಿ ಅಲೆಯುತ್ತಿರುವ ಕಾರಣ ಯಾವಾಗ ಯಾರ ಮೇಲೆ ದಾಳಿ ಮಾಡಿಬಿಡುತ್ತವೆಯೇನೋ ಎಂಬ ಭಯವೂ ಜನರಲ್ಲಿ ಕಾಡುತ್ತಿವೆ.

ಒಂದೆಡೆ ಹುಲಿ ಮತ್ತೊಂದೆಡೆ ಕಾಡಾನೆ ಇವುಗಳ ನಡುವೆ ಜಿಲ್ಲೆಯ ಜನ ನಲುಗುತ್ತಿದ್ದು, ಕೂಡಲೇ ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡು ಕಾಡಾನೆಗಳು ನಾಡಿಗೆ ಬರದಂತೆ ತಡೆಯುವ ಕೆಲಸವನ್ನು ಮಾಡಬೇಕಿದೆ. ಕೆಲವರು ಹೇಳುವ ಪ್ರಕಾರ ಕೇರಳದ ಕಡೆಯಿಂದ ಕಾಡಾನೆಗಳು ಬರುತ್ತಿವೆ ಎನ್ನಲಾಗುತ್ತಿದೆ. ಅದು ಏನೇ ಇರಲಿ ಕೊಡಗಿನ ಜನ ಮಾತ್ರ ಕಾಡಾನೆ ಭಯದಲ್ಲಿಯೇ ತೋಟದಲ್ಲಿ ಕೆಲಸ ಮಾಡುವಂತಾಗಿರುವುದು ಮಾತ್ರ ಬೇಸರದ ಸಂಗತಿಯಾಗಿದೆ.