ಕೊಡಗು : ಧಾರಾಕಾರ ಮಳೆಗೆ ಜನ ಜೀವನ, ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಕೃಷಿ ಭೂಮಿ ಜಲಾವೃತವಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ ಕಿರು ಸೇತುವೆ ಕುಸಿಯುವ ಭೀತಿ ಉಂಟಾಗಿದೆ.

ಮಳೆ ನೀರಿನ ರಭಸಕ್ಕೆ ಸಣ್ಣ ಸೇತುವೆ ಕುಸಿಯುವ ಹಂತ ತಲುಪಿದೆ. ಪೊನ್ನಂಪೇಟೆ ತಾಲ್ಲೂಕಿನ ಕಾನೂರಿನಲ್ಲಿ ಗಾಳಿ ಮಳೆಗೆ ಕರೆಂಟ್ ಕಂಬಗಳ ತುದಿ ಭಾಗ ಮುರಿದಿದೆ. ವಯರ್ನ ಆಸರೆಯಲ್ಲಿರುವ ವಿದ್ಯುತ್ ಕಂಬ ತುಂಡಾಗಿದೆ. ಮಂಗಳೂರು ರಸ್ತೆಯ ಕಾಟಕೇರಿ ಬಳಿ ಲಾರಿಯ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಗಾಳಿ ಸಹಿತ ಮಳೆಗೆ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ.

