ಕೊಡಗು: ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ನದಿಗಳು ಭರ್ತಿಯಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕಾವೇರಿ ಲಕ್ಷ್ಮಣ ತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ. ಇದ್ರಂದಿ ನದಿ ಪಾತ್ರದಲ್ಲಿ ವಾಸಿಸುವ ಜನರನ್ನ ಕಾಳಜಿ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗುತ್ತಿದೆ.

ಕೊಡುಗು ಜಿಲ್ಲೆಯಲ್ಲಿ ವರುಣನ ಆರ್ಭಟದಿಂದ ಜೋರು ಮಳೆಗೆ ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿಪಾತ್ರದದ ಜನರಲ್ಲಿ ಆತಂಕ ಮನೆಮಾಡಿದೆ. ಅಪಾಯದ ಮುನ್ಸೂಚನೆ ಇರುವ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಎನ್ ಡಿಆರ್ಎಫ್  ತಂಡ ಬೀಡುಬಿಟ್ಟಿವೆ. ಕೊಡಗು ವಾಸಿಗಳು ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಹೌದು, ಕೊಡುಗು ಜಿಲ್ಲೆಯಲ್ಲಿ ಜೋರು ಮಳೆಯಾಗುತ್ತಿದ್ದು ಅಲ್ಲಲ್ಲಿ ಅವಾಂತರ ಸೃಷ್ಟಿಯಾಗಿದೆ. ಭಾಗಮಂಡಲದಲ್ಲಿ ಸುರಿಯುತ್ತಿರುವ ಮಳೆಯಿಂದ ಕಾವೇರಿ ನದಿ ಭರ್ತಿಯಾಗಿ ಹರಿಯುತ್ತಿದೆ. ಇತ್ತ ಲಕ್ಷ್ಮಣ ತೀರ್ಥ ನದಿಯೂ ಮೈದುಂಬಿ ಹರಿಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷಿ ಭೂಮಿ, ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಇದ್ರಿಂದ ಜನ ಕಂಗಾಲಾಗಿದ್ದಾರೆ.

ಜಿಲ್ಲೆಯ ಹಲವು ಭಾಗಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದ್ರಿಂದ ವಾಹನ ಸಂಚಾರ, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದ್ದು, ಕೆಲವು ಭಾಗಗಳಲ್ಲಂತೂ ರಸ್ತೆ ಸಂಪರ್ಕ ಕಡಿತ, ವಿದ್ಯುತ್ ಕಡಿತವಾಗಿ ಜನ ಪರದಾಡುವಂತಾಗಿದೆ.

ಮಳೆ ಅವಾಂತರದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಜಿಲ್ಲಾಡಳಿತ ಸಜ್ಜಾಗಿದ್ದು, ಜಿಲ್ಲೆಯಲ್ಲಿ ಎನ್ಡಿಆರ್ಎಫ್ ತಂಡ ಸೇರಿ ರಕ್ಷಣಾ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಜಿಲ್ಲೆಯಲ್ಲಿ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರಗಳನ್ನ ತೆರೆಯಲಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿರುದಾಲೆ ಗ್ರಾಮದಲ್ಲಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹೊಳೆ ಅಂಚಿನಲ್ಲಿ ವಾಸ ಮಾಡುತ್ತಿರುವ ಸುಮಾರು 10 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

2018 ರಿಂದಲೇ ಕಿರುದಾಲೆ ಗ್ರಾಮದಲ್ಲಿ ವಾಸ ಮಾಡುವ ಮನೆಗಳಲ್ಲಿ ಬಿರುಕು ಮೂಡಿವೆ. ಈಗ ಗಾಳಿ ಮಳೆ ಹೆಚ್ಚಾಗಿರುವುದರಿಂದ ಯಾವ ಸಮಯದಲ್ಲಿ ಎನಾಗುತ್ತೋ ಅನ್ನೋ ಆತಂಕದಲ್ಲಿ ಕಾಳಜಿ ಕೇಂದ್ರಗಳಿಗೆ ತೆರಳುತ್ತಿದ್ದಾರೆ. ಕಳೆದ 4 ದಿನಗಳಿಂದ ಹೊಳೆಯ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಅಲ್ಲದೇ ಮನೆಗಳು ಸಂಪೂರ್ಣ ಹಾನಿಯಾಗಿವೆ. ಗೋಡೆಗಳಲ್ಲಿ ಬಿರುಕು ಮೂಡಿದೆ. ಯಾವ ಕ್ಷಣದಲ್ಲಾದರೂ ಮನೆಗಳು ಬೀಳುವಂತಿವೆ. ಹೀಗಾಗಿ ಸ್ವಯಂಪ್ರೇರಿತವಾಗಿ ಕಾಳಜಿ ಕೇಂದ್ರಗಳತ್ತ ಜನ ಮುಖ ಮಾಡಿದ್ದಾರೆ.

ಇನ್ನೂ, ಸೋಮವಾರಪೇಟೆ ತಹಶಿಲ್ದಾರ್ ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ತೊಂದರೆಯಲ್ಲಿ ಇರುವಂತಹ ಕುಟುಂಬಸ್ಥರನ್ನ ಗುರುತಿಸಿ ಅವರ ಸಹಾಯಕ್ಕೆ ನಿಂತು ಕಾಳಜಿ ಕೇಂದ್ರಗಳಿಗೆ ಅವರನ್ನ ಶಿಫ್ಟ್‌ ಮಾಡಿಸುತ್ತಿದ್ದಾರೆ. ಜೊತೆಗೆ ಮಳೆಗಾಲ ಕಳೆಯುವವರೆಗೂ ಕಾಳಜಿ ಕೇಂದ್ರಗಳಲ್ಲಿ ಎಲ್ಲರೂ ಕಾಳಜಿ ಕೇಂದ್ರದಲ್ಲಿ ಇರಬಹುದು. ಜಿಲ್ಲಾಡಳಿತ ನಿಮ್ಮೊಟ್ಟಿಗಿದೆ ಅಂತಾ ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.

ಒಟ್ಟಾರೆ, ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ, ಚಳಿಯ ವಾತಾವರಣ ಇದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷಿ ಭೂಮಿ, ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತವಾಗಿ ತಮ್ಮೂರಿನಲ್ಲಿ ವಾಸ ಮಾಡಲಾಗದ ಸ್ಥಿತಿಯಲ್ಲಿರುವ ಸಂತ್ರಸ್ತರು ಕಾಳಜಿ ಕೇಂದ್ರಗಳಿಗೆ ತೆರಳುತ್ತಿದ್ದಾರೆ. ಇನ್ನೊಂದಡೆ ಮಳೆ ಅವಾಂತರಕ್ಕೆ ಅತಂತ್ರರಾಗಿದ್ದಾರೆ.

ಸಿ.ಎಂ ಸುಗಂಧರಾಜು ಮೈಸೂರು