ಕೊಡಗು : ಜೋರು ಮಳೆ ಹಿನ್ನಲೆ ಕೊಡಗಿನಲ್ಲಿ ಅಬ್ಬಿ ಫಾಲ್ಸ್ ಭೋರ್ಗರೆಯುತ್ತಿದೆ. ಕೊಡಗಿನ ಪ್ರವಾಸಿ ತಾಣಗಳಲ್ಲಿ ಪ್ರಮುಖ ಆಕರ್ಷಣೆ ಅಬ್ಬಿ ಫಾಲ್ಸ್ ಆಗಿರುತ್ತದೆ. ಜೂನ್ ತಿಂಗಳ ಮಧ್ಯದಲ್ಲಿ ಅಬ್ಬಿ ಮೈದುಂಬುತ್ತಿತ್ತು. ಇದೀಗ ಕೊಡಗಿನಲ್ಲಿ ನಿರಂತರ ಮಳೆಯಿಂದ ಮೇ ತಿಂಗಳಲ್ಲೇ ಅಬ್ಬಿ ಫಾಲ್ಸ್ ಭೋರ್ಗರೆತ ಶುರುವಾಗಿದೆ.

ಮಂಜು ಮುಸುಕಿದ ವಾತಾವರಣ, ಸುರಿಯುವ ಮಳೆ, ಚುಮುಚುಮು ಚಳಿಯಲ್ಲಿ ಪ್ರವಾಸಿಗರನ್ನ ಅಬ್ಬಿ ಫಾಲ್ಸ್ ಸೆಳೆಯುತ್ತಿದೆ. ನಸುಗೆಂಪು ಬಣ್ಣದಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತದ ಸೌಂದರ್ಯಕ್ಕೆ ಪ್ರವಾಸಿಗರು ಫಿಧಾ ಆಗಿದ್ದಾರೆ. ಮಡಿಕೇರಿಯಿಂದ ಕೇವಲ 8 ಕಿಮೀ ದೂರದಲ್ಲಿ ಅಬ್ಬಿ ಫಾಲ್ಸ್ ಇದೆ.

80 ಅಡಿ ಎತ್ತರದಿಂದ ಅಬ್ಬಿ ಜಲಪಾತ ಧುಮ್ಮಿಕ್ಕುತ್ತಿದೆ. ಹೆಬ್ಬಂಡೆಗಳ ಮೇಲಿಂದ ಅಬ್ಬಿ ಫಾಲ್ ವೈಯ್ಯಾರದಿ ಪ್ರವಾಸಿಗರ ಕಣ್ತುಂಬುತ್ತಿದೆ. ಮಳೆ, ಚಳಿ ನಡುವೆ ಅಬ್ಬಿ ಫಾಲ್ಸ್‌ಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಕಪ್ಪು ಬಂಡೆಗಳ ನಡುವೆ ಭೋರ್ಗರೆವ ದೃಶ್ಯ ಸೆರೆ ಹಿಡಿದು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಸೊರಗುವ ಅಬ್ಬಿ ಇದೀಗ ಮೈದುಂಬಿ ಹರಿಯುವ ದೃಶ್ಯ ರಮಣೀಯವಾಗಿದೆ.