ಮಡಿಕೇರಿ: ಬೇಸಿಗೆಯ ರಣಬಿಸಿಲು ಹೆಚ್ಚುತ್ತಿದ್ದಂತೆಯೇ ಅರಣ್ಯ ಪ್ರದೇಶ, ಬೆಟ್ಟಗುಡ್ಡಗಳಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತಿದ್ದು ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಎಷ್ಟೇ ಜಾಗ್ರತೆ ವಹಿಸಿದರೂ ಒಂದಲ್ಲ ಒಂದು ಕಡೆ ಅವಘಡಗಳು ಸಂಭವಿಸುತ್ತಿದ್ದು, ಇದೀಗ ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳ ಸಕಾಲದಲ್ಲಿ ಆಗಮಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ವಿರಾಜಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತೆ ಮಲೆತಿರಿಕೆ ಬೆಟ್ಟವಿದ್ದು ಈ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ಥಳೀಯರು ಪುರಸಭೆ, ಪೊಲೀಸ್ ಇಲಾಖೆ, ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಬೆಂಕಿಯನ್ನು ನಂದಿಸು ಕೆಲಸ ಆರಂಭವಾಗಿದ್ದು, ಈ ವೇಳೆ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರು ಸರಬರಾಜು ವಾಹನದಲ್ಲಿ ನೀರು ಸಿಂಪಡಿಸಿ ಬೆಂಕಿಯನ್ನು ನಂದಿಸುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಈ ನಡುವೆ ಬೆಂಕಿಯ ತೀವ್ರತೆ ಹೆಚ್ಚಾದಾಗ ಪುರಸಭೆ ಅಧ್ಯಕ್ಷೆ ದೇಚಮ್ಮಕಾಳಪ್ಪ ಅವರು ಶಾಸಕ ಪೊನ್ನಣ್ಣ ಅವರ ಗಮನಕ್ಕೆ ತಂದ ತಕ್ಷಣವೇ ಹುದಿಕೇರಿಯಲ್ಲಿದ್ದ ಅಗ್ನಿಶಾಮಕ ವಾಹನ ವನ್ನು ವಿರಾಜಪೇಟೆ ಗೆ ಕಳುಹಿಸಿ ಕೊಟ್ಟಿದ್ದಾರೆ. ಹೀಗಾಗಿ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಉರಿಯುತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಲೆತಿರಿಕೆ ಬೆಟ್ಟಕ್ಕೆ ಪುರಸಭೆ ಮುಖ್ಯಧಿಕಾರಿ ನಾಚಪ್ಪ, ಪರಿಸರ ಅಭಿಯಂತರ ರೀತ್ ಸಿಂಗ್, ಆರೋಗ್ಯ ಅಧಿಕಾರಿ ಕೋಮಲ, ಪೌರ ಕಾರ್ಮಿಕರು. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಗೂ ಆನೆ ಕಾರ್ಯ ಪಡೆಯ ಸಿಬ್ಬಂದಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪೊಲೀಸ್ ಅಧಿಕಾರಿ ಗಳು ಮತ್ತು ಸಿಬ್ಬಂದಿ ಹಾಗೂ ಸ್ಥಳೀಯರು ಅಗ್ನಿಶಾಮಕ ದಳದ ಅಧಿಕಾರಿ ಡಿ.ಜೆ ಮಂಜೆಗೌಡ ಮೊದಲಾದವರು ತೆರಳಿ ಬೆಂಕಿಯನ್ನು ನಂದಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ.

