ಬಾಂಗ್ಲಾದೇಶ : ಬಾಂಗ್ಲಾದೇಶ  ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆಶ್ರಯ ನೀಡಿದ ಭಾರತದ ವಿರುದ್ಧ ಬಿಎನ್‌ಪಿ  ಸೇರಿದಂತೆ ಬಾಂಗ್ಲಾದೇಶದ ವಿರೋಧ ಪಕ್ಷಗಳು ಭಾರತದ ವಿರುಧ್ದ ಕಿಡಿಕಾರುತ್ತಿವೆ. ಬಿಎನ್​​ಪಿ ಪ್ರಸ್ತುತ ಮಧ್ಯಂತರ ಸರ್ಕಾರದಲ್ಲಿ ಪ್ರಬಲ ಪ್ರಭಾವ ಹೊಂದಿದೆ. ಗಣ ಅಧಿಕಾರ್ ಪರಿಷತ್ ಅಧ್ಯಕ್ಷ ವಿಪಿ ನೂರುಲ್ ಹಕ್ ನೂರ್ ಅವರು ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದು, ಆಕೆಯನ್ನು ಕೂಡಲೇ ಬಾಂಗ್ಲಾದೇಶಕ್ಕೆ ಹಸ್ತಾಂತರಿಸದಿದ್ದರೆ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಕಳೆದ ಶುಕ್ರವಾರ (ಆಗಸ್ಟ್ 9) ಢಾಕಾದಲ್ಲಿ ನಡೆದ ‘ಸಾಮರಸ್ಯ ರ‍್ಯಾಲಿ’ಯಲ್ಲಿ ಮಾತನಾಡಿದ ಅವರು, ‘ಭಾರತದೊಂದಿಗೆ ಕೈದಿಗಳ ವಿನಿಮಯ ಒಪ್ಪಂದ ಮಾಡಿಕೊಂಡಿದ್ದೇವೆ. ಶೇಖ್ ಹಸೀನಾಳನ್ನು ಬೇರೆ ದೇಶಗಳಿಗೆ ಕಳುಹಿಸುವ ಬದಲು ಕೂಡಲೇ ಬಾಂಗ್ಲಾದೇಶಕ್ಕೆ ಕಳುಹಿಸಬೇಕು. ಇಲ್ಲವಾದಲ್ಲಿ ಭಾರತೀಯ ಹೈಕಮಿಷನರ್ ಅವರನ್ನು ಪೀಪಲ್ಸ್ ರೈಟ್ಸ್ ಕೌನ್ಸಿಲ್ ಸುತ್ತುವರೆದಿರುತ್ತದೆ ಎಂದಿದ್ದಾರೆ. ಅಂದಹಾಗೆ, ಪೀಪಲ್ಸ್ ರೈಟ್ಸ್ ಕೌನ್ಸಿಲ್ ಬಾಂಗ್ಲಾದೇಶದಲ್ಲಿ ಹೊಸ ರಾಜಕೀಯ ಪಕ್ಷವಾಗಿದೆ. 2022 ರಲ್ಲಿ ರೆಜಾ ಕಿಬ್ರಿಯಾ ಮತ್ತು ನೂರುಲ್ ಹಕ್ ನೂರ್ ಅವರ ನೇತೃತ್ವದಲ್ಲಿ ರಚನೆಯಾದ ಪಕ್ಷವಿದು.