ಕಾರವಾರ: ಶಿರೂರು ಗುಡ್ಡ ಕುಸಿತದ ಮಣ್ಣು ತೆರವು ಕಾರ್ಯಾಚರಣೆಯು ಶುಕ್ರವಾರ ಹನ್ನೊಂದನೆಯ ದಿನಕ್ಕೆ ಕಾಲಿಟ್ಟಿದೆ. ಈ ದುರಂತದಲ್ಲಿ ಒಟ್ಟು 10 ಮಂದಿ ನಾಪತ್ತೆಯಾಗಿದ್ದು, ಇದುವರೆಗೆ 7 ಮಂದಿಯ ಶವ ಪತ್ತೆಯಾಗಿದೆ. ಉಳಿದ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಅಂಕೋಲಾ- ಶಿರೂರು ಗುಡ್ಡಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ಮಾಹಿತಿ ನೀಡಿದರು. ಗುಡ್ಡ ಕುಸಿದ ಸ್ಥಳದಲ್ಲಿ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧ್ಯಯನ ನಡೆಸಿತ್ತು. ಗುಡ್ಡಕುಸಿದ ಪ್ರದೇಶದಲ್ಲಿ ಕೆಲವೊಂದು ಅಗತ್ಯಕ್ರಮ ಕೈಗೊಳ್ಳಲು ವರದಿಯಲ್ಲಿ ಸೂಚಿಸಿತ್ತು. ಅದರಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಕ್ರಮಕ್ಕೆ ಸೂಚನೆ ನೀಡಲಾಗಿತ್ತು.
ನದಿಯಲ್ಲಿ ಅತ್ಯಾಧುನಿಕ ಡ್ರೋನ್ ಸ್ಕ್ಯಾನಿಂಗ್ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ನಿನ್ನೆ ಗುರುವಾರ ರಾತ್ರಿ ಮಳೆಯಿಂದಾಗಿ ಸ್ಕ್ಯಾನಿಂಗ್ ಕಾರ್ಯಕ್ಕೆ ಅಡ್ಡಿಯಾಗಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆಗೆ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಂಡಿದ್ದು, ನದಿಯಲ್ಲಿ ಹುಡುಕಬೇಕಾದ ಜಾಗಗಳನ್ನು ಡೈವಿಂಗ್ ಮಾಡಿಯೇ ಗುರುತಿಸುವ ಕೆಲಸವಾಗಿದೆ.
ನೌಕಾನೆಲೆಯ ತಂಡ 2-3 ಗಂಟೆಗೊಮ್ಮೆ ನದಿಯ ಹರಿವಿನ ವೇಗವನ್ನು ಪರಿಶೀಲಿಸುತ್ತಿದ್ದಾರೆ. ಮಧ್ಯಾಹ್ನದವರೆಗೂ 6 ನಾಟ್ಸ್ಗಿಂತ ಅಧಿಕ ವೇಗದಲ್ಲಿ ನದಿ ಹರಿಯುತ್ತಿದೆ. ಹೀಗಾಗಿ ಶಾಸಕರು ಸೂಚಿಸಿದಂತೆ ಪ್ಲೋಟಿಂಗ್ ಪ್ಲಾಟ್ಫಾರಂ ತಂದು ಪ್ರಯತ್ನಿಸಲಾಗುವುದು. ಶನಿವಾರ ಪ್ಲೋಟಿಂಗ್ ಪ್ಲಾಟ್ಫಾರಂ ಬರುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ತಿಳಿಸಿದರು.

