ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ-ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದವರ ರಕ್ಷಣಾ ಕಾರ್ಯಾಚರಣೆ ಇಂದು (ಜುಲೈ 25) 10ನೇ ದಿನಕ್ಕೆ ಕಾಲಿಟ್ಟಿದೆ.ದುರಂತದಲ್ಲಿ ಒಟ್ಟು 10 ಮಂದಿ ನಾಪತ್ತೆಯಾಗಿದ್ದು, ಇದುವರೆಗೆ 7 ಮಂದಿಯ ಶವ ಪತ್ತೆಯಾಗಿದೆ. ಜತೆಗೆ ಮಣ್ಣಿನಲ್ಲಿ ಹುದುಗಿರುವ ಕೇರಳದ ಲಾರಿ ಪತ್ತೆಯಾಗಿದ್ದು, ಅದನ್ನು ಮೇಲಕ್ಕೆ ಎತ್ತಲು ಪ್ರಯತ್ನ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬೂಮ್ ಹಿಟಾಚಿ ಲಾರಿಯ ಸುಳಿವು ನೀಡುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಇರುವಿಕೆಯನ್ನ ಖಚಿತಪಡಿಸಿದ್ದಾರೆ. ಸ್ವತಃ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ‌ ಅವರು ಬೋಟ್‌ನಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಸೇನೆ, ನೌಕಾಪಡೆ ಹಾಗೂ ಸ್ಯಾಟಲೈಟ್ ತಂತ್ರಜ್ಞಾನದಲ್ಲಿ ಟ್ರಕ್ ಮಾದರಿ ವಸ್ತು ಇರುವುದು ಪತ್ತೆಯಾಗಿದ್ದರಿಂದ ಪರಿಶೀಲನೆಯನ್ನು ತೀವ್ರಗೊಳಿಸಲಾಗಿತ್ತು.

ಇಂದು ಮಳೆ ಕಡಿಮೆಯಿದ್ದಲ್ಲಿ ನೌಕಾನೆಲೆ ಮುಳುಗು ತಜ್ಞರು ಸಮೀಪಕ್ಕೆ ತೆರಳಿ ಶೋಧಿಸಲಿದ್ದಾರೆ. ಲಾರಿ ಒಳಗೆ ಸಿಲುಕಿಕೊಂಡಿರುವ ಚಾಲಕ ಅರ್ಜುನ್‌ಗಾಗಿ ಹುಡುಕಾಟ ಮುಂದುವರಿಯಲಿದೆ. ಕ್ಯಾಬಿನ್‌ನಲ್ಲಿ ಅವರಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಿ ಬಳಿಕ ಲಾರಿಯನ್ನು ಮೇಲಕ್ಕೆತ್ತಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.