ಕಾರವಾರ: ಅಂಕೋಲಾ ಶಿರೂರು ಬಳಿ ಹೆದ್ದಾರಿಯಲ್ಲಿ ಭಾರಿ ಗುಡ್ಡ ಕುಸಿದು ಹತ್ತು ಮಂದಿ ನಾಪತ್ತೆಯಾದ ಘೋರ ದುರಂತದ ಸ್ಥಳದಲ್ಲಿ ಐದು ಶವಗಳು ಪತ್ತೆಯಾಗಿವೆ. ಇಂದು ಮುಂಜಾನೆಯಿಂದ ಮತ್ತೆ ಶವ ಪತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಎನ್ಡಿಆರ್ಎಫ್ ತಂಡ ಪಾಲ್ಗೊಂಡಿದೆ. ಈಗಾಗಲೇ ಐದು ಮೃತದೇಹಗಳು ಪತ್ತೆಯಾಗಿವೆ. ಮತ್ತಷ್ಟು ಜನ ಮಣ್ಣಿನಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಹತ್ತು ಮಂದಿ ಮಣ್ಣಿನೊಳಗೆ ಸಿಲುಕಿದ್ದಾರೆ ಎಂದು ಶಂಕಿಸಲಾಗಿತ್ತು.
ಭೂಕುಸಿತ ಕಾರ್ಯಾಚರಣೆ ಹಿನ್ನಲೆ ಶಿರೂರು ವ್ಯಾಪ್ತಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ವಿಧಿಸಲಾಗಿದೆ. ಅಂಕೋಲಾ ತಾಲ್ಲೂಕಿನ ವಾಸರಕುದ್ರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿರೂರು ಗ್ರಾಮದಲ್ಲಿ ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶದ ಸುತ್ತ ಸಾರ್ವಜನಿಕರು, ವಾಹನ ಸವಾರರು ಓಡಾಡದಂತೆ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಆದೇಶಿಸಿದ್ದಾರೆ. ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಮುನ್ನೆಚ್ಚರಿಕೆಯಾಗಿ ನಿಷೇಧ ವಿಧಿಸಲಾಗಿದೆ.

