ಯಲ್ಲಾಪುರ: ಅಕ್ರಮವಾಗಿ ಲಾರಿಯಲ್ಲಿ ತುಂಬಿಕೊಂಡು ಕಸಾಯಿಖಾನೆಗೆ ಸಾಗಿಸುತ್ತಿದ್ದ 19 ಜಾನುವಾರುಗಳನ್ನು ಇಲ್ಲಿನ ಪೊಲೀಸರು ದಾಳಿ ನಡೆಸಿ ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಸೋಮವಾರ ತಡರಾತ್ರಿ ಹುಬ್ಬಳ್ಳಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಕೇರಳದ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಪಟ್ಟಣದ ಜೋಡುಕೆರೆ ಸಮೀಪ ಹೊಂಚು ಹಾಕಿ ಈಚರ್ ಲಾರಿಯನ್ನು ತಡೆದು ತಪಾಸಣೆ ನಡೆಸಿದ್ದಾರೆ.

ಲಾರಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ವಧೆ ಮಾಡುವ ಉದ್ದೇಶದಿಂದ 12 ಹೋರಿಗಳು,4 ಕೋಣಗಳು,3 ಎಮ್ಮೆಗಳು ಸೇರಿದಂತೆ ಒಟ್ಟು 19 ಜಾನುವಾರುಗಳನ್ನು ಅತ್ಯಂತ ಕ್ರೂರವಾಗಿ ಕಟ್ಟಿ ಹಾಕಿರುವುದು ಕಂಡುಬಂದಿದೆ.

ಲಾರಿ ಚಾಲಕ ಮಹಮ್ಮದ್ ರಫಿ ಜಾಫರ್ ಪಾಷಾ ಹಾಗೂ ಕ್ಲೀನರ್ ಬೆಲ್ಲದಬಾಗೇವಾಡಿಯ ದ್ಯಾನೇಶ ಮೈಸೂರು ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಜಾನುವಾರುಗಳನ್ನು ಕೇರಳದ ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಪೊಲೀಸರು ದಾಳಿಯ ವೇಳೆ ಅಂದಾಜು 4.85 ಲಕ್ಷ ರೂ. ಮೌಲ್ಯದ ಜಾನುವಾರುಗಳನ್ನು ಹಾಗೂ 6 ಲಕ್ಷ ರೂ. ಮೌಲ್ಯದ ಈಚರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.