ಕಾರವಾರ: ಹದಿನಾರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಅಭಿನಂದನ್ ಗೌಡ ಎಂಬಾತನನ್ನು ಬಂಧಿಸಲಾಗಿದೆ.
ಈ ಅಭಿನಂದನ್ ಎಂಬುವವನು ಬಾಲಕಿಗೆ ಪುಸಲಾಯಿಸಿ ಭಟ್ಕಳಕ್ಕೆ ಕರೆತಂದು, ಅಲ್ಲಿನ ಲಾಡ್ಜ್ ಒಂದರಲ್ಲಿ ಅತ್ಯಾಚಾರ ನಡೆಸಿದ್ದ ಎಂದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಗೆ ಸಂಬಂಧಿಸಿ ಸಂತ್ರಸ್ತ ಬಾಲಕಿ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಪೊಲೀಸರು ಪಿಎಸ್‌ಐ ಅಭಿನಂದನ್ ಗೌಡನನ್ನು ಬಂಧಿಸಿ ತನಿಖೆ ಮುಂದುವರಿದ್ದಾರೆ.
ಬಂಧಿತ ಅಭಿನಂದನ್ ಗೌಡ ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನವನಾಗಿದ್ದು, ಕೆಲವು ತಿಂಗಳುಗಳ ಹಿಂದೆಯಷ್ಟೇ ಉತ್ತರ ಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣೆಗೆ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿಯಾಗಿ ವರ್ಗಾವಣೆಗೊಂಡು ಬಂದಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆದಿದೆ.
ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಸಿಲುಕಿರುವ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗೆ ಲಭಿಸಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ. ಆದರೆ, ನಿಯಮಾನುಸಾರ ನಿಯಮಿತ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಸ್ವಾಮೀಜಿಗೆ ನ್ಯಾಯಾಲಯವು ಮೂರು ವಾರಗಳ ಕಾಲಾವಕಾಶ ನೀಡಿದೆ.
ಸ್ವಾಮೀಜಿಯವರಿಗೆ ಕೆಳ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.
ವಿಚಾರಣೆ ವೇಳೆ ಹೈಕೋರ್ಟ್ ಪ್ರಮುಖವಾಗಿ ಕೆಳ ನ್ಯಾಯಾಲಯದ ಪ್ರಕ್ರಿಯೆಯನ್ನು ಆಕ್ಷೇಪಿಸಿತು. ಪೊಲೀಸರ ಬಳಿ ಅಧಿಕೃತವಾಗಿ ದೂರು ದಾಖಲಾಗುವ ಒಂದು ವಾರಕ್ಕೂ ಮುಂಚಿತವಾಗಿಯೇ ವಚನಾನಂದ ಸ್ವಾಮೀಜಿಯವರಿಗೆ ನಿರೀಕ್ಷಣಾ ಜಾಮೀನು ನೀಡಲಾಗಿತ್ತು. ದೂರು ದಾಖಲಾಗುವ ಮುನ್ನವೇ ಇಂತಹ ಗಂಭೀರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ವಿಧಾನ ಸರಿಯಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ತಕ್ಷಣವೇ ಅದನ್ನು ರದ್ದುಪಡಿಸಿತು.
ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದೆಯಾದರೂ, ತಕ್ಷಣದ ಬಂಧನದಿಂದ ಸ್ವಾಮೀಜಿಯವರಿಗೆ ತಾತ್ಕಾಲಿಕ ರಕ್ಷಣೆ ನೀಡಿದೆ. ವಚನಾನಂದ ಶ್ರೀಗಳು ಸಂಬಂಧಪಟ್ಟ ನ್ಯಾಯಾಲಯಕ್ಕೆ ನಿಯಮಿತ ಜಾಮೀನು ಅರ್ಜಿ ಸಲ್ಲಿಸಲು ಮುಂದಿನ ಮೂರು ವಾರಗಳ ಕಾಲಾವಕಾಶ ನೀಡಲಾಗಿದ್ದು, ಅಲ್ಲಿಯವರೆಗೆ ಅಂದರೆ ಮೂರು ವಾರಗಳ ಅವಧಿಗೆ ಹಳೆಯ ನಿರೀಕ್ಷಣಾ ಜಾಮೀನಿನ ರಕ್ಷಣೆ ಮುಂದುವರಿಯಲಿದೆ ಎಂದು ಪೀಠವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

