ಉತ್ತರ ಕನ್ನಡ: ಅಂಕೋಲಾ ತಾ| ಶಿರೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 6 ಜನರ ಮೃತದೇಹಗಳು ಪತ್ತೆಯಾಗಿವೆ.
ಇನ್ನುಳಿದವರ ಮೃತ ದೇಹಗಳಿಗಾಗಿ ಎನ್ಡಿಆರ್ಎಫ್ ಶೋಧ ಕಾರ್ಯ ಮುಂದುವರೆಸಿದೆ. ಇನ್ನು ಈ ಘಟನೆಯಲ್ಲಿ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ಇಟ್ಟುಕೊಂಡಿದ್ದ ಒಂದೇ ಕುಟುಂಬದ ಲಕ್ಷ್ಮಣ್ ನಾಯ್ಕ್, ಪತ್ನಿ ಶಾಂತಿ, ಪುತ್ರಿ ಆವಾತಿಕಾ ಹಾಗೂ ಪುತ್ರ ರೋಷನ್(11) ಸೇರಿ ಟ್ರಕ್ ಚಾಲಕನ ಶವ ಪತ್ತೆಯಾಗಿದೆ. ಈ ನಾಲ್ವರ ಮೃತದೇಹಗಳು ಗೋಕರ್ಣ ಸಮೀಪ ಸಿಕ್ಕಿದೆ.
ಇನ್ನು ಘಟನಾ ಸ್ಥಳದಲ್ಲಿ ಒಂದು ಟೀ ಅಂಗಡಿ ಇತ್ತು. ಟಿ ಅಂಗಡಿಯಲ್ಲಿ ನಾಲ್ಕು ಜನ ಇದ್ದರು. ಗ್ಯಾಸ್ ಟ್ಯಾಂಕರ ಕೂಡ ಇಲ್ಲೇ ನಿಲ್ಲಿಸಿದ್ದರು. ಗ್ಯಾಸ್ ಟ್ಯಾಂಕರ್ ಕೆಳಗೆ ನದಿಗೆ ಬಿದ್ದಿದೆ. ಕಾರು ಮತ್ತು ಟೀ ಅಂಗಡಿಯಲ್ಲಿದ್ದವರು ಸೇರಿ ಸುಮಾರು ಒಂಬತ್ತು ಜನ ಮಣ್ಣಿನಡಿ ಸಿಲುಕಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಒಬ್ಬರು ತಿಳಿಸಿದ್ದಾರೆ.

