ಉಡುಪಿ: ಸೌಜನ್ಯ ಪ್ರಕರಣದಲ್ಲಿ ನ್ಯಾಯ ಒದಗಿಸಲು ಹಾಗೂ ಧರ್ಮಸ್ಥಳ ಭಾಗದಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಎಲ್ಲ ಆತ್ಮಗಳ ಮುಕ್ತಿ, ನ್ಯಾಯಕ್ಕೆೆ ಆಗ್ರಹಿಸಿ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆೆಯಾಗಬೇಕೆಂಬ ಉದ್ದೇಶದಿಂದ ಇದೇ ಆ.24ರಂದು ಏಕಕಾಲದಲ್ಲಿ ರಾಜ್ಯದ ಸುಮಾರು 25 ಸಾವಿರಕ್ಕೂ ಅಧಿಕ ದೈವ-ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ಸೌಜನ್ಯ ಪರ ಹೋರಾಟ ಸಮಿತಿಯ ಕೆ. ದಿನೇಶ್ ಗಾಣಿಗ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಅತ್ಯಾಚಾರ, ಕೊಲೆ, ದರೋಡೆಗಳು ನಡೆಯುತ್ತಿದೆ. 1976ರಲ್ಲಿ ಶಿಕ್ಷಕಿ ವೇದವಲ್ಲಿ ಅವರನ್ನು ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿತ್ತು.
1986ರಲ್ಲಿ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಪದ್ಮಲತಾ ಅತ್ಯಾಚಾರ ಹಾಗೂ ಕೊಲೆ, 2012ರಲ್ಲಿ ಆನೆ ಮಾವುತ ನಾರಾಯಣ ಮತ್ತು ಯಮುನಾ ಅವರ ಕೊಲೆ, 2012ರ ಅ.9ರಂದು ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ನಡೆದಿತ್ತು. ಧರ್ಮಸ್ಥಳ ಮತ್ತು ಉಜಿರೆಯಲ್ಲಿ 2002ರಿಂದ 2012ರವರೆಗೆ 452 ಅಸಹಜ ಸಾವು ನಡೆದಿತ್ತು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 2015ರಿಂದ 2025ರವರೆಗೆ 260ಕ್ಕೂ ಅಧಿಕ ಅಸಹಜ ಸಾವು ಪ್ರಕರಣಗಳು ನಡೆದಿವೆ ಎಂದರು.
1983ರಿಂದ ಹಲವು ಬಾರಿ ಬಿಜೆಪಿ ಶಾಸಕರು ಸದನದಲ್ಲಿ ಧರ್ಮಸ್ಥಳದಲ್ಲಿ ಆಗುತ್ತಿರುವಂತಹ ಕೊಲೆ, ಅತ್ಯಾಚಾರದ ಬಗ್ಗೆೆ ಚರ್ಚೆ ನಡೆಸಿದ್ದರು. ಆ ವೇಳೆ ಕ್ಷೇತ್ರಕ್ಕೆೆ ಅಪಪ್ರಚಾರ ಆಗಲಿಲ್ಲವೇ? ಸೌಜನ್ಯಾ ಹೋರಾಟಗಾರರು ನ್ಯಾಯದ ಪರವಾಗಿ ಹೋರಾಟ ಮಾಡಿದರೆ ಧರ್ಮ ಹಾಳುಗುತ್ತದೆಯೇ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ತಮ್ಮಣ್ಣ ಶೆಟ್ಟಿ, ಸಚಿನ್ ಶ್ರೀಯಾನ್, ಅಂಬಿಕಾ ಪ್ರಭು ಇದ್ದರು.

