ಉಡುಪಿ: ಪಶ್ಚಿಮ ಘಟ್ಟದ ಜೀವವೈವಿಧ್ಯ ಅಧ್ಯಯನಕ್ಕೆ ಮಹತ್ವದ ಬೆಳವಣಿಗೆಯಾಗಿ, ಭಾರತದ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿ ‘ಕನಿ ಮರನಂಡು’ ಮೊದಲ ಬಾರಿಗೆ ಆಗುಂಬೆಯಲ್ಲಿ ದಾಖಲಾಗಿದೆ.

ಇದುವರೆಗೆ ಈ ಅಪರೂಪದ ಏಡಿ ಕೇವಲ ಕೇರಳದ ಆಗಸ್ತ್ಯಮಲೆ ಜೈವಿಕ ವಲಯದಲ್ಲಿ ಮಾತ್ರ ದಾಖಲಾಗಿತ್ತು. ಇದೀಗ ಸುಮಾರು 566 ಕಿಲೋಮೀಟರ್ ದೂರದಲ್ಲಿರುವ ಆಗುಂಬೆಯಲ್ಲಿ ಈ ಪ್ರಭೇದ ಪತ್ತೆಯಾಗಿರುವುದು ಇದರ ವಿತರಣಾ ವ್ಯಾಪ್ತಿಯ ಕುರಿತು ಹೊಸ ಬೆಳಕು ಚೆಲ್ಲಿದೆ.

ಸಂಶೋಧಕರಾದ ಜೋಯೆಲ್ ಕೊರೆಯ, ಪವನ್ ಚಿಕ್ಕನಾರಾಯಣಸ್ವಾಮಿ ಹಾಗೂ ವಿಜಯ್ ಕುಮಾರ್ ನಡೆಸಿದ ಅಧ್ಯಯನದಲ್ಲಿ ಈ ಅಪರೂಪದ ಮರವಾಸಿ ಏಡಿ ಪತ್ತೆಯಾಗಿದೆ. ಗೆಕಾರ್ಸಿನುಸಿಡೆ ಕುಟುಂಬಕ್ಕೆ ಸೇರಿದ ಈ ಪ್ರಭೇದವು ಭಾರತದಲ್ಲಿ ಸಂಪೂರ್ಣವಾಗಿ ಮರಗಳಲ್ಲೇ ವಾಸಿಸುವ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿ ಎಂಬ ವಿಶೇಷತೆಯನ್ನು ಹೊಂದಿದೆ.

ಸಂಶೋಧಕರ ಪ್ರಕಾರ, 2023ರಲ್ಲಿ ಆಗುಂಬೆಯ ಸದಾಹಸಿರು ಮಳೆಕಾಡಿನಲ್ಲಿ ಈ ಏಡಿ ಮೊದಲ ಬಾರಿಗೆ ನೆಲದ ಮೇಲೆ ಸಂಚರಿಸುತ್ತಿರುವುದು ದಾಖಲಾಗಿತ್ತು. ಬಳಿಕ 2025ರಲ್ಲಿ ಮರದ ನೀರು ತುಂಬಿದ ಕುಳಿಯಲ್ಲಿ ಮತ್ತೊಂದು ಏಡಿ ಪತ್ತೆಯಾಗಿದ್ದು, ಛಾಯಾಚಿತ್ರಗಳ ಆಧಾರದ ಮೇಲೆ ಇದೇ ಪ್ರಭೇದ ಎಂದು ದೃಢಪಡಿಸಲಾಗಿದೆ.

ಉದ್ದವಾದ ಕಾಲುಗಳು, ಅಂಡಾಕಾರದ ಕವಚ, ಹಳದಿ–ಕಿತ್ತಳೆ ಬಣ್ಣದ ಕೊಕ್ಕುಗಳು ಹಾಗೂ ನೀಲಿಕಪ್ಪು ಬಣ್ಣದ ದೇಹ ಈ ಏಡಿಯ ಪ್ರಮುಖ ಗುರುತುಗಳಾಗಿವೆ. ಎರಡನೇ ಬಾರಿ ಕಂಡುಬಂದ ಏಡಿಯು ಗಂಡು ಎಂದು ಸಂಶೋಧಕರು ಗುರುತಿಸಿದ್ದಾರೆ.

ಇದುವರೆಗೆ ಈ ಪ್ರಭೇದವನ್ನು ಸಂಪೂರ್ಣ ಮರವಾಸಿ ಎಂದು ಪರಿಗಣಿಸಲಾಗಿತ್ತು. ಆದರೆ ಆಗುಂಬೆಯಲ್ಲಿ ನೆಲದ ಮೇಲೂ ಸಂಚರಿಸುತ್ತಿರುವುದು ದಾಖಲಾಗಿರುವುದು ಇದರ ಪರಿಸರಶಾಸ್ತ್ರದ ಕುರಿತು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಂಗಾತಿಯನ್ನು ಹುಡುಕುವುದು ಅಥವಾ ಹೊಸ ವಾಸಸ್ಥಳವನ್ನು ಅನ್ವೇಷಿಸುವ ಉದ್ದೇಶದಿಂದ ಇದು ನೆಲಕ್ಕಿಳಿಯುವ ಸಾಧ್ಯತೆ ಇದ್ದು, ವಿಶೇಷವಾಗಿ ಮಳೆಗಾಲದಲ್ಲಿ ಈ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಏಡಿಯು ನಿತ್ಯಹರಿದ್ವರ್ಣ ಹಾಗೂ ಅರೆ ನಿತ್ಯಹರಿದ್ವರ್ಣ ಕಾಡಿನ ಮರಗಳ ಕಾಂಡದಲ್ಲಿರುವ ನೀರು ತುಂಬಿದ ಕುಳಿಗಳಲ್ಲಿ ವಾಸಿಸುತ್ತದೆ. ಎಲೆಗಳು, ಬೀಜಗಳು, ಕೀಟಗಳು ಹಾಗೂ ಸ್ಲಗ್‌ಗಳು ಇದರ ಪ್ರಮುಖ ಆಹಾರವಾಗಿವೆ. ಆಗುಂಬೆಯಲ್ಲಿ ಮೈರಿಸ್ಟಿಕಾ ಜೌಗು ಪ್ರದೇಶದ ಸಮೀಪ ಇದು ಪತ್ತೆಯಾಗಿರುವುದು, ನೀರಿನ ಮೂಲಗಳ ಸಮೀಪದ ಪರಿಸರವನ್ನು ಇದು ಹೆಚ್ಚಾಗಿ ಆಶ್ರಯಿಸುತ್ತದೆ ಎಂಬುದನ್ನು ಸೂಚಿಸುತ್ತದೆ.

ಈ ಹೊಸ ದಾಖಲೆಯು ಪಶ್ಚಿಮ ಘಟ್ಟದ ಜೀವವೈವಿಧ್ಯ ಅಧ್ಯಯನಕ್ಕೆ ಮಹತ್ವದ ಕೊಡುಗೆಯಾಗಿದ್ದು, ಈ ಅಪರೂಪದ ಏಡಿಯ ವಿತರಣಾ ಪ್ರದೇಶ, ಪರಿಸರಶಾಸ್ತ್ರ, ವರ್ತನೆ ಹಾಗೂ ಸಂರಕ್ಷಣಾ ಸ್ಥಿತಿಯ ಕುರಿತು ಪಶ್ಚಿಮ ಘಟ್ಟದಾದ್ಯಂತ ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

View this post on Instagram

A post shared by News Karnataka (@newskarnataka)