ಉಡುಪಿ: ಮಂಗಳೂರಿನಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ₹32 ಸಾವಿರ ಕೋಟಿ ಮೊತ್ತದ ಕರಾವಳಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮಂಗಳೂರಿಗೆ ಬಂದ ಸಂದರ್ಭದಲ್ಲಿ ₹32 ಸಾವಿರ ಕೋಟಿ ಮೊತ್ತದ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಆರ್ಥಿಕ ಇಲಾಖೆ ಹೊಸ ಘೋಷಣೆಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದು, ಈಗಾಗಲೇ ಘೋಷಿಸಿರುವ ಯೋಜನೆಗಳಿಗೆ ಹಣ ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯ ಸರ್ಕಾರಕ್ಕೆ ಸಾಲ ಪಡೆಯುವ ಪರಿಸ್ಥಿತಿಯೂ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಹೀಗಿರುವಾಗ ಮಂಗಳೂರಿನಲ್ಲಿ ಘೋಷಿಸಿರುವ ₹32 ಸಾವಿರ ಕೋಟಿಯನ್ನು ಬಜೆಟ್‌ನಲ್ಲಿ ಹೇಗೆ ಒದಗಿಸಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.

ಯೋಜನೆಗಳು ಯಾವಾಗ ಅನುಷ್ಠಾನಗೊಳ್ಳುತ್ತವೆ, ಆರಂಭದಲ್ಲಿ ಎಷ್ಟು ಕೋಟಿ ಬಿಡುಗಡೆ ಮಾಡಲಾಗುತ್ತದೆ, ಬಜೆಟ್‌ಗೂ ಮುನ್ನವೇ ಹಣ ನೀಡಲಾಗುತ್ತದೆಯೇ, ಯಾವ ಶೀರ್ಷಿಕೆಯಲ್ಲಿ ಅನುದಾನ ಒದಗಿಸಲಾಗುತ್ತದೆ, ಟೆಂಡರ್ ಯಾವಾಗ ಕರೆಯಲಾಗುತ್ತದೆ ಹಾಗೂ ಕಾಮಗಾರಿ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಸರ್ಕಾರ ಮುಂದಿನ ಹೆಜ್ಜೆ ಏನು ಇಡುತ್ತದೆ ಎಂಬುದನ್ನು ನೋಡಿಕೊಂಡು ಪ್ರತಿಕ್ರಿಯಿಸುವುದಾಗಿ ಕೋಟ ಹೇಳಿದರು.