ಉಡುಪಿ: ಬಜೆ ಡ್ಯಾಂನಿಂದ ಉಡುಪಿ ನಗರಕ್ಕೆ ನೀರು ಪೂರೈಸುವ ಜವಾಬ್ದಾರಿ ಹಾಗೂ ನಿರ್ವಹಣೆಯನ್ನು ವಾರಾಹಿ ನೀರು ಸರಬರಾಜು ಗುತ್ತಿಗೆ ಸಂಸ್ಥೆಯಾದ ಸುಯೆಝ್ ಪ್ರೊಜೆಕ್ಟ್ ಅವರಿಗೆ ಹಸ್ತಾಂತರಿಸಲು ಉಡುಪಿ ನಗರಸಭೆಯಿಂದ ನಿರ್ಧರಿಸಲಾಗಿದೆ.
ಉಡುಪಿ ನಗರಕ್ಕೆ ವಾರಾಹಿ ನೀರು ಸರಬರಾಜು ಸಂಬಂಧ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ವಾರಾಹಿ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು. ಅದರಂತೆ ಮೂರು ತಿಂಗಳುಗಳ ಕಾಲ ಪ್ರಾಯೋಗಿಕವಾಗಿ ನೀರು ಪೂರೈಸಲು ಜವಾಬ್ದಾರಿಯನ್ನು ಸುಯೆಝ್ ಪ್ರೋಜೆಕ್ಟ್‌ನವರಿಗೆ ವಹಿಸಿಕೊಡಲಾಯಿತು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಈ ಹಸ್ತಾಂತರ ಪ್ರಕ್ರಿಯೆಯನ್ನು 15 ದಿನಗಳೊಳಗೆ ಪೂರ್ಣಗೊಳಿಸಲಾಗುತ್ತದೆ. ಮುಂದೆ 3 ತಿಂಗಳುಗಳ ಕಾಲ ಪ್ರಾಯೋಗಿಕವಾಗಿ ನೀರು ಪೂರೈಸಲು ವ್ಯವಸ್ಥೆಯನ್ನು ಪ್ರೋಜೆಕ್ಟ್‌ನವರೇ ಮಾಡಬೇಕು. ಈ ಸಂದರ್ಭ ಯಾವುದೇ ದೂರುಗಳು ಕೇಳಿಬಂದರೆ ಹಸ್ತಾಂತರ ಪ್ರಕ್ರಿಯೆಯನ್ನು ಮುಂದೂಡಲಾಗುವುದು ಎಂದರು.
ವಾರಾಹಿ ಯೋಜನೆಯಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನೆಲ್ಲ ಈ 3 ತಿಂಗಳೊಳಗೆ ಬಗೆಹರಿಸಿ ವಾರಾಹಿ ಯಿಂದ ನಗರಕ್ಕೆ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಬೇಕು. ಉಡುಪಿ ನಗರಸಭೆ ಮಹಾನಗರ ಆಗುವ ಪ್ರಕ್ರಿಯೆ ನಡೆಯುತ್ತಿದ್ದು, ಮತ್ತಷ್ಟು ಪಂಚಾಯತ್‌ಗಳು ಇದಕ್ಕೆ ಸೇರಿದರೆ ನೀರಿನ ಪೂರೈಕೆಯನ್ನೂ ಹೆಚ್ಚಳ ಮಾಡಬೇಕಾಗುತ್ತದೆ ಎಂದು ಹೇಳಿದರು.
ವಾರಾಹಿ ನೀರು ಪೂರೈಕೆಯ ಗುತ್ತಿಗೆ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಸುದೀಪ್ ಮಾತನಾಡಿ, ವಾರಾಹಿ ನೀರು ಸರಬರಾಜು ಮತ್ತು ನಿರ್ವಹಣೆ ಯನ್ನು ನಮಗೆ ಎಂಟು ವರ್ಷಗಳಿಗೆ ನೀಡಿದ್ದು, ಇದೀಗ ಬಜೆಯಿಂದ ನೀರು ಪೂರೈಕೆ ಮಾಡುವ ಜವಾಬ್ದಾರಿಯನ್ನು ಕೂಡ ಕೂಡಲೇ ನೀಡಬೇಕು. ಇಲ್ಲಿರುವ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿ ದಿನ 24ಗಂಟೆ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸದ್ಯಕ್ಕೆ ಬಜೆಯಿಂದ 28 ಎಂಎಲ್‌ಡಿ ನೀರು ಪಂಪ್ ಮಾಡಲಾಗುತ್ತಿದೆ. ನಾವು ಇದೇ ಪಂಪ್‌ನಿಂದ 36 ಎಂಎಲ್‌ಡಿ ನೀರು ಪಂಪ್ ಮಾಡುತ್ತೇವೆ. ಇದನ್ನು ಈಗ ಇರುವ 10 ಟ್ಯಾಂಕ್‌ಗಳಿಗೆ ಬದಲು ಹೊಸ 7 ಟ್ಯಾಂಕ್‌ಗಳನ್ನು ಸೇರಿಸಿ ಒಟ್ಟು 17 ಟ್ಯಾಂಕ್ ಮೂಲಕ ಸಮರ್ಪಕವಾಗಿ ನಗರಕ್ಕೆ ನೀರು ಪೂರೈಕೆ ಮಾಡಲಾಗುವುದು. ಈಗ ಇರುವ ನಾಲ್ಕು ವಲಯಗಳ ಬದಲು 17 ವಲಯಗಳನ್ನಾಗಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

