ಉಡುಪಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಭಾರತದ ಐಕ್ಯತೆಯ ಓಟವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ನಗರದ ಜೋಡುಕಟ್ಟೆಯಿಂದ ಆರಂಭಗೊಂಡ ಐಕ್ಯತೆಯ ಓಟವು ಬೋರ್ಡ್ ಹೈಸ್ಕೂಲ್ ವರೆಗೆ ಸಾಗಿಬಂತು. ಬಳಿಕ ಪ್ರತಿಜ್ಞಾವಿಧಿ ಸ್ವೀಕರಿಸುವ ಕಾರ್ಯಕ್ರಮ ನಡೆಯಿತು. ಆ ನಂತರ ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ರಾಜಪ್ರಭುತ್ವದ ರಾಜ್ಯಗಳ ಆಡಳಿತಗಾರರನ್ನು ಒಗ್ಗೂಡಿಸಿ ಏಕ ಭಾರತ ನಿರ್ಮಾಣ ಮಾಡಿದ ಕೀರ್ತಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಸಲ್ಲುತ್ತದೆ. ಭಾರತ ಏಕೀಕರಣದಲ್ಲಿ ಅವರ ಪಾತ್ರ ದೊಡ್ಡದು. ಅವರ ಆದರ್ಶ, ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅವಡಿಸಿಕೊಳ್ಳಬೇಕು ಎಂದರು.
ಎಎಸ್ಪಿ ಪ್ರಭು ಡಿ.ಟಿ., ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ. ಬಡಿಗೇರ್, ಪೊಲೀಸ್ ಉಪನಿರೀಕ್ಷಕ ಭರತೇಶ್, ಪೊಲೀಸ್ ನಿರೀಕ್ಷಕ ನಾರಾಯಣ, ಹಿರಿಯಡಕ ಠಾಣೆಯ ಪೊಲೀಸ್ ಉಪನಿರೀಕ್ಷಕ ಪುನೀತ್ ಕುಮಾರ್, ಮಲ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

