ಉಡುಪಿ: ಜಿಲ್ಲೆಯ ಉದ್ಯಾವರದಲ್ಲಿರುವ ರಾಷ್ಟ್ರೀಯ ಹೆದ್ದಾರಿ-66ರ ಮೇಲಿನ ಸೇತುವೆ ಇದೀಗ ಸಾರ್ವಜನಿಕರಲ್ಲಿ ಆತಂಕ ಮೂಡಿಸುವ ಸ್ಥಳವಾಗಿ ಮಾರ್ಪಡುತ್ತಿದೆ. ಪಾಪಾನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಮರುಕಳಿಸುತ್ತಿದ್ದು, ಸ್ಥಳೀಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಾಣಹಾನಿ ತಡೆಯಲು ಸೇತುವೆಗೆ ಎತ್ತರದ ತಡೆಬೇಲಿ, ಸಿಸಿ ಕ್ಯಾಮೆರಾ ಸೇರಿದಂತೆ ಶಾಶ್ವತ ಸುರಕ್ಷತಾ ವ್ಯವಸ್ಥೆ ಕಲ್ಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ-66ರ ಪಾಪಾನಾಶಿನಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಉದ್ಯಾವರ ಸೇತುವೆ, ಈಗ ಜನರ ಆತಂಕದ ಕೇಂದ್ರವಾಗಿ ಪರಿಣಮಿಸಿದೆ.
ಕಳೆದ ಕೆಲವು ವರ್ಷಗಳಿಂದ ಈ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಪದೇ ಪದೇ ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ಕೂಡ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸೇತುವೆಯ ಎರಡೂ ಬದಿಗಳಲ್ಲಿ ಸುಮಾರು 8 ರಿಂದ 10 ಅಡಿ ಎತ್ತರದ ಕಬ್ಬಿಣದ ತಂತಿ ತಡೆಬೇಲಿ ನಿರ್ಮಿಸಿದರೆ ನದಿಗೆ ಹಾರುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ದೇಶದ ಹಲವು ರಾಜ್ಯಗಳಲ್ಲಿ ಇದೇ ಮಾದರಿಯ ಸುರಕ್ಷತಾ ವ್ಯವಸ್ಥೆ ಅಳವಡಿಸಿ ಉತ್ತಮ ಎನ್ನುವುದ ಸ್ಥಳೀಯ ರ ಅಭಿಪ್ರಾಯ.
ಇದರೊಂದಿಗೆ ಸೇತುವೆಯ ಮೇಲೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದರೆ ಅನುಮಾನಾಸ್ಪದ ಚಲನವಲನಗಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಹಾಗೂ ರಕ್ಷಣಾ ತಂಡಗಳಿಗೆ ತಕ್ಷಣ ಮಾಹಿತಿ ನೀಡಿ ಜೀವ ಉಳಿಸುವ ಪ್ರಯತ್ನ ನಡೆಸಲು ಸಹ ಇದು ನೆರವಾಗಲಿದೆ.
ತಡೆಬೇಲಿ ನಿರ್ಮಾಣದಿಂದ ಆತ್ಮಹತ್ಯೆ ತಡೆಯುವುದಷ್ಟೇ ಅಲ್ಲ, ಪಾಪಾನಾಶಿನಿ ನದಿಗೆ ಕಸ ಹಾಗೂ ತ್ಯಾಜ್ಯ ಎಸೆಯುವ ಪ್ರವೃತ್ತಿಗೂ ಕಡಿವಾಣ ಬೀಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದರಿಂದ ಪರಿಸರ ಸಂರಕ್ಷಣೆಯ ಜೊತೆಗೆ ನದಿಯ ಸ್ವಚ್ಛತೆಯನ್ನೂ ಕಾಪಾಡಲು ಸಾಧ್ಯವಾಗಲಿದೆ.
ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಸೇತುವೆಯಾಗಿರುವ ಕಾರಣ, ಮತ್ತಷ್ಟು ಅಮೂಲ್ಯ ಜೀವಗಳು ಬಲಿಯಾಗುವ ಮುನ್ನವೇ ಸಂಬಂಧಪಟ್ಟ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತುರ್ತಾಗಿ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಜೀವ ಉಳಿಸುವುದು ಯಾವುದೇ ಅಭಿವೃದ್ಧಿ ಕಾಮಗಾರಿಗಿಂತಲೂ ದೊಡ್ಡ ಜವಾಬ್ದಾರಿ. ಉದ್ಯಾವರ ಸೇತುವೆಯಲ್ಲಿ ತಕ್ಷಣ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಹಲವು ಅಮೂಲ್ಯ ಜೀವಗಳನ್ನು ಉಳಿಸಬಹುದೆಂಬುದು ಸ್ಥಳೀಯರ ಆಶಯ. ಅಧಿಕಾರಿಗಳು ಈ ಮನವಿಗೆ ಯಾವಾಗ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

