ಉಡುಪಿ: ಉಡುಪಿ ಜಿಲ್ಲಾ ವಕ್ಫ್ ಮಂಡಳಿ‌ ಜಿಲ್ಲಾಧ್ಯಕ್ಷರ ಆಯ್ಕೆ ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಸಭೆಯಲ್ಲಿ ಮುಸ್ಲಿಂ ಮುಖಂಡರು ಈ ಬಗ್ಗೆ  ಅಸಮಾಧಾನ ಹೊರಹಾಕಿದರು.

ಹೌದು, ಜಿಲ್ಲಾ ಕಾಂಗ್ರೆಸ್ಸಿಗೆ ವಕ್ಫ್ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕಗ್ಗಾಂಟಾಗಿ ಪರಿಣಮಿಸಿದೆ.ಕಳೆದ ಹಲವು ವರ್ಷಗಳಿಂದ ವಕ್ಫ್ ಬೋರ್ಡ್ ನಲ್ಲಿ  ಯಾವುದೇ ಕೆಲಸಗಳು ಆಗುತ್ತಿಲ್ಲ. ಹೀಗಾಗಿ ಈ ಬಾರಿ ಪಕ್ಷಕ್ಕೆ ಸಂಬಂಧವೇ ಇಲ್ಲದವರನ್ನು ಆಯ್ಕೆ ಮಾಡಲು ಪಕ್ಷ  ಮುಂದಾಗಿದ್ದು, ಈ ಕ್ರಮಕ್ಕೆ ಸಭೆಯಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿದೆ.

ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಇದರಿಂದ ಪೈಪೋಟಿ  ಹೆಚ್ಚಾಗಿದ್ದು, ಕೆಲವರು ಅಧ್ಯಕ್ಷ ಸ್ಥಾನಕ್ಕಾಗಿ ದುಂಬಾಲು ಬಿದ್ದಿದ್ದಾರೆ. ಪಕ್ಷಕ್ಕೆ ಸಂಬಂಧವೇ ಇಲ್ಲದ ಉದ್ಯಮಿಗಳು ಕೂಡ ಈ ರೇಸ್ ನಲ್ಲಿರುವುದು ಅಚ್ಚರಿ ಮೂಡಿಸಿದೆ. ಮುಸ್ಲಿಂ ಸಮುದಾಯದಲ್ಲಿ ಹಲವು ಪಂಗಡಗಳು ಇದ್ದು ಇಲ್ಲಿಯೂ ಕೂಡ ಒಳಗೊಳಗೆ ಭಿನ್ನಭಿಪ್ರಾಯಗಳು ಮೂಡಿಬಂದಿದ್ದು, ಈ ಹಿನ್ನಲೆಯಲ್ಲಿ ಎಲ್ಲರನ್ನು ಜೊತೆಯಾಗಿ ಸೇರಿಸಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವಂತೆ ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.

ಮುಸ್ಲಿಂ ಸಮುದಾಯದ ಜೊತೆ ಸದಾ ಸಂಪರ್ಕದಲ್ಲಿದ್ದು, ಸಮುದಾಯದ ಕಷ್ಟ ಕಾರ್ಪಣ್ಯಗಳಿಗೆ ಜೊತೆಯಾಗಿರುವುದಲ್ಲದೇ, ಪಕ್ಷಕ್ಕೂ ಕೆಲಸ ಮಾಡಿ ಕೊಡುಗೆ ನೀಡಿದಂತಹ ಹಿರಿಯರಿಗೆ ಮೊದಲ ಆದ್ಯತೆ ನೀಡಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ತಮಗೆ ಇಷ್ಟ ಬಂದವರಿಗೆ ಅಧ್ಯಕ್ಷ ಸ್ಥಾನ ಕೊಟ್ಟು ಕೈ ತೊಳೆದುಕೊಳ್ಳಬೇಕೆಂದುಕೊಂಡಿದ್ದ ಪಕ್ಷದ ಮುಖಂಡರಿಗೆ ಸಮುದಾಯದ ಮುಖಂಡರ ಈ ಬೇಡಿಕೆ ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.