ಉಡುಪಿ: ಉಡುಪಿಯ ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದಲ್ಲಿ ಪ್ರತಿಷ್ಠಿತ ಅಡ್ವಕೇಟ್ ಪಿ. ಶಿವಾಜಿ ಶೆಟ್ಟಿ ಸ್ಮಾರಕ 10ನೇ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಎ.10 ರಿಂದ 12ರವರೆಗೆ ಆಯೋಜಿಸಲಾಗುತ್ತಿದೆ ಎಂದು ಪ್ರಾಂಶುಪಾಲೆ ಪ್ರೊ. ಸುರೇಖಾ ಕೆ. ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎ. 10ರ ಮಧಾಹ್ನ 2.30ಕ್ಕೆ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಜಿ.ಉಮಾ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಅಲೈಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಪ್ರಕಾಶ್ ಕಣಿವೆ, ಡಾ. ಟಿ.ಎಂ.ಎ. ಪೈ ಪ್ರತಿಷ್ಠಾನದ ಮುಖ್ಯಸ್ಥರಾದ ಟಿ. ಅಶೋಕ ಪೈ ಹಾಗೂ ದಿವಂಗತ ಪಿ. ಶಿವಾಜಿ ಶೆಟ್ಟಿಯವರ ಧರ್ಮಪತ್ನಿ ಜಯಂತಿ ಪಿ. ಶಿವಾಜಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಎ. 12 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಮತ್ತು ದೆಹಲಿಯ ಆದಾಯ ತೆರಿಗೆ ನ್ಯಾಯ ಮಂಡಳಿಯ ನ್ಯಾಯಿಕ ಸದಸ್ಯ ಯೊಗೇಶ್ ಕುಮಾ‌ರ್ ಯು.ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ‌. ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಕಾನೂನು ಕಾಲೇಜುಗಳ 28 ತಂಡಗಳು ಭಾಗವಹಿಸುತ್ತಿವೆ. ಈ ಸ್ಪರ್ಧೆಯಲ್ಲಿ ಕಾನೂನು ರಸಪ್ರಶ್ನೆ ಸ್ಪರ್ಧೆ ಹಾಗೂ ತೀರ್ಪು ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಪ್ರಿಲ್ 20 ಮತ್ತು 21 ರಂದು “ಪುನಶ್ಚೇತನ್ಯಕಾರಿ ನ್ಯಾಯ ಸುಸ್ಥಿರತೆ ಮತ್ತು ಹವಾಮಾನ ಕ್ರಮ” ಎಂಬ ವಿಷಯದ ಮೇಲೆ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೂಟ್ ಕೋರ್ಟ್ ಸೊಸೈಟಿಯ ಕೋ ಆರ್ಡಿನೇಟರ್ ಡಾ. ಶ್ರೀನಿವಾಸ ಪ್ರಸಾದ್, ಡಾ. ಪ್ರೀತಿ ಹರೀಶ್ ರಾಜ್, ಜಯಂತಿ ಪಿ. ಶಿವಾಜಿ ಶೆಟ್ಟಿ, ಡಾ. ಜಯಮೋಲ್ ಪಿ.ಎಸ್, ಈರಪ್ಪ ಎಸ್ ಮೇದರ್, ಅಮೋಘ ಗಡ್ಕರ್ ಉಪಸ್ಥಿತರಿದ್ದರು.