ಉಡುಪಿ: ಉಡುಪಿ ನಗರಸಭೆಯ 2025-26ನೆ ಸಾಲಿನ 5.17ಕೋಟಿ ರೂ. ಮಿಗತೆಯ ಆಯವ್ಯಯ ಮುಂಗಡ ಪತ್ರವನ್ನು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಶನಿವಾರ ಮಂಡಿಸಿದರು.

ಈ ಬಾರಿಯ ಮುಂಗಡ ಪತ್ರದಲ್ಲಿ ಒಟ್ಟು 250.63ಕೋಟಿ ರೂ. ಆದಾಯ (ಆರಂಭದ ಶಿಲ್ಕು 107.57ಕೋಟಿ ರೂ. ಮತ್ತು ಒಟ್ಟು ಸ್ವೀಕೃತಿಗಳು 143.06 ಕೋಟಿ ರೂ.) ಹಾಗೂ 245.46ಕೋಟಿ ರೂ. ಒಟ್ಟು ವೆಚ್ಚಗಳನ್ನು ತೋರಿಸಲಾಗಿದೆ.

ನಗರದ ವಿಶ್ವೇಶ್ವರಯ್ಯ ಮಾರುಕಟ್ಟೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ, 33 ಟನ್ ಸಾಮರ್ಥ್ಯದ ಎಂ.ಆರ್ಎಫ್ ಘಟಕ ನಿರ್ಮಾಣಕ್ಕೆ 4.45ಕೋಟಿ ರೂ. ಅಂದಾಜು ಮೊತ್ತಕ್ಕೆ ಡಿಪಿಆರ್ ತಯಾರಿಸಲಾಗಿದೆ.

ಉಡುಪಿ ನಗರದ ವಾಹನ ಮತ್ತು ಜನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ವೃತ್ತಗಳು ಮತ್ತು ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಲಾಗುವುದು. ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಸಾಧ್ಯ ಇರುವಲ್ಲಿ ರಸ್ತೆಗಳಿಗೆ ಪುಟ್ಪಾತ್ ರಚಿಸಿ ರೇಲಿಂಗ್ ಅಳವಡಿಸಲಾಗುವುದು. ರಸ್ತೆ ಅಗಲೀಕರಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು ಎಂದು ಪ್ರಭಾಕರ ಪೂಜಾರಿ ಮುಂಗಡ ಪತ್ರದಲ್ಲಿ ತಿಳಿಸಿದ್ದಾರೆ.

ಬಳಿಕ ನಡೆದ ಚರ್ಚೆಯಲ್ಲಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಸದಸ್ಯರಾದ ಅಮೃತ ಕೃಷ್ಣಮೂರ್ತಿ, ಸುಮಿತ್ರಾ ಆರ್.ನಾಯಕ್, ಕೃಷ್ಣರಾಜ್ ಕೊಡಂಚ, ಗಿರೀಶ್ ಅಂಚನ್, ವಿಜಯ ಕೊಡವೂರೂ ಮೊದಲಾದವರು ಪಾಲ್ಗೊಂಡರು. ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.