ಉಡುಪಿ: ಉಡುಪಿ ಮಣಿಪಾಲ ನಗರ ಬೆಳೆಯುತ್ತಿದ್ದಂತೆ ದಿನೇ ದಿನೆ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಪ್ರಮುಖ ಜಂಕ್ಷನ್‌ಗಳಲ್ಲಿ ಪರಿಹಾರ ಕ್ರಮವಾಗಿ ರೂಪಿಸಲು ನಿರ್ಧರಿಸಿದ್ದ ಸ್ಮಾರ್ಟ್‌ ಟ್ರಾಫಿಕ್‌ ಸಿಗ್ನಲ್‌ ಹಳ್ಳಹಿಡಿದಿದೆ. ಮೂರು ವರ್ಷಗಳ ಹಿಂದೆಯೇ ಮಣಿಪಾಲದ ಟೈಗರ್‌ ವೃತ್ತದಲ್ಲಿ ಪ್ರಯೋಗಾತ್ಮಕವಾಗಿ ಆರಂಭಿಸಿದ್ದರೂ ಅನಂತರ ಯಾವುದೇ ಪ್ರಗತಿ ಕಂಡಿಲ್ಲ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೂಪುಗೊಂಡ ಈ ಯೋಜನೆ ಹಲವು ತಾಂತ್ರಿಕ ಕಾರಣದಿಂದ ಆರಂಭವೇ ಕಂಡಿಲ್ಲ.

ಮಣಿಪಾಲದ ಟೈಗರ್‌ ಸರ್ಕಲ್‌, ಸಿಂಡಿಕೇಟ್‌ ವೃತ್ತ, ಕಲ್ಸಂಕದಲ್ಲಿ ಯೋಜನೆ ಅನುಷ್ಠಾನಕ್ಕೆ ಪೂರಕವಾಗಿ ಬೃಹದಾಕಾರದ ಪೋಲ್‌ಗ‌ಳನ್ನು ಅಳವಡಿಸಲಾಗಿದೆ. ಅಂಬಾಗಿಲು, ಉದ್ಯಾವರ ಬಲಾಯಿಪಾದೆ, ಹಳೆ ಡಯಾನ ವೃತ್ತದಲ್ಲಿ ಯೋಜನೆಯ ಭಾಗವಾಗಿ ಪೋಲ್‌ಗ‌ಳನ್ನು ಅಳವಡಿಸಲು ಚಿಂತನೆ ನಡೆದಿತ್ತು. ಸಿಗ್ನಲ್‌ ಅಳವಡಿಕೆಗಾಗಿ ನಿರ್ಮಿಸಿದ ಬೃಹತ್‌ ಕಂಬಗಳು ಅನಾಥಸ್ಥಿತಿಯಲ್ಲಿದ್ದು, ಇದಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸಲಾಗಿತ್ತು.
ನಗರಸಭೆಯ ಹಿಂದಿನ ಆಡಳಿತಾವಧಿಯಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಯೋಜನೆಯಲ್ಲಿ ಸ್ಮಾರ್ಟ್‌ ಸಿಗ್ನಲ್‌ಗ‌ಳನ್ನು ಅಳವಡಿಸಲು ಟೆಂಡರ್‌ ಕರೆಯಲಾಗಿತ್ತು. ಮುಂಬಯಿ ಮೂಲದ ಖಾಸಗಿ ಕಂಪೆನಿ ಗುತ್ತಿಗೆ ಪಡೆದಿತ್ತು. ಆದರೆ ಟೆಂಡರ್‌ ತಾಂತ್ರಿಕ ಸಮಸ್ಯೆ ಹಾಗೂ ಸಿಗ್ನಲ್‌ ಅಳವಡಿಕೆ ವ್ಯವಸ್ಥಿತವಾಗಿರದ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಯೋಜನೆ ತಾತ್ಕಾಲಿಕವಾಗಿ ಸ್ಥಗಿತೊಂಡಿದೆ.