ಉಡುಪಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ನುಡಿದಂತೆ ನಡೆದ ಸರಕಾರ.ಬಡವರ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಿದೆ.ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಪಂಚ ಗ್ಯಾರಂಟಿ ಫಲಾನುಭವಿಗಳು ಇದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ.
ಅವರು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆದ ಪಂಚ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಉಡುಪಿ ಜಿಲ್ಲೆಯಲ್ಲಿ ನಮ್ಮ ಶಾಸಕರು ಇಲ್ಲ. ಆದರೂ ಅತಿ ಹೆಚ್ಚು ಜನರಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿದ್ದೇನೆ. ಮೊದಲು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಬಿಜೆಪಿ ಇದೀಗ ಬೇರೆ ಬೇರೆ ರಾಜ್ಯಗಳಲ್ಲಿ ಗ್ಯಾರಂಟಿ ಘೋಷಣೆ ಮಾಡುತ್ತಿದ್ದಾರೆ. 2014 ರಿಂದ ದೇಶದ ಬಡವರಿಗೆ ಬಿಜೆಪಿಯಿಂದ ಯಾವುದೇ ಪ್ರಯೋಜನ ಆಗಲಿಲ್ಲ.ಮುಂದಿನ ಚುನಾವಣೆಗೆ ಅವರು ನಿಮ್ಮ ಎದುರು ಬಂದಾಗ ಅವರನ್ನು ನಂಬಬೇಡಿ ಎಂದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಬಿಜೆಪಿಯವರು ಚುನಾವಣೆಗೋಸ್ಕರ ಭಾವನಾತ್ಮಕ ವಿಷಯಗಳನ್ನು ತರುತ್ತಾರೆ.ಆದರೆ ನಾವು ಬಡಜನರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಕೊಡುತ್ತಿದ್ದೇವೆ.ಇದು ತುಂಬ ಮುಖ್ಯ.ನಾವು ನುಡಿದಂತೆ ನಡೆದಿದ್ದೇವೆ. ನಮಗೆ ಪಂಚ ಗ್ಯಾರಂಟಿ ಸೌಲಭ್ಯ ಕೊಡಲು ಸಾಧ್ಯ ಆಗುವುದಾದರೆ ಬಿಜೆಪಿಯವರಿಗೆ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಪೂಜಾರಿ ಹೇರೂರು, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಮುಖಂಡರಾದ ಡಾ. ಸುನೀತಾ ಶೆಟ್ಟಿ, ರಮೇಶ್ ತಿಂಗಳಾಯ, ಅಬ್ಬು ಸಾಹೇಬ್, ಪ್ರಭಾಕರ ಶೆಟ್ಟಿ, ಜಯಂತಿ ಪೂಜಾರಿ, ಯೋಗೀಶ್ ಪೂಜಾರಿ, ಸುದೇಶ್ ಶೆಟ್ಟಿ, ಜಸಿಂತಾ ಪಾಯಸ್, ಲಕ್ಷ್ಮೀಶ್ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಬ್ರಹ್ಮಾವರ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಕುಮಾರ್ ಸುವರ್ಣ ಸ್ವಾಗತಿಸಿದರು.

