ಉಡುಪಿ: ನೈಸಿಯಾ ವಿಶ್ವಾಸದ ಘೋಷಣೆ ಕ್ರೈಸ್ತ ಬಂಧುಗಳಿಗೆ ವಿಶ್ವಾಸದ ಅಡಿಪಾಯವಾಗಿದೆ. ಯಾವುದೇ ಸಭೆಗಳಿಗೂ ಸೇರಿದ್ದರೂ ಕೂಡ ಒಂದೇ ವಿಶ್ವಾಸದ ಘೋಷಣೆ ಮಾಡುವಾಗ ಐಕ್ಯತೆಯನ್ನು ಪ್ರಚುರಪಡಿಸಿದಂತಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತದಾರರಾದ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಉಡುಪಿ ಯುಬಿಎಂ ಜುಬಿಲಿ ಮೆಮೋರಿಯಲ್ ಸಭಾಂಗಣದಲ್ಲಿ ಯುನಾಯ್ಟೆಡ್ ಬಾಸೆಲ್ ಮಿಷನ್ ಚರ್ಚ್, ಉಡುಪಿ ಧರ್ಮಪ್ರಾಂತ್ಯದ ಐಕ್ಯತಾ ಆಯೋಗ ಮತ್ತು ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಇವರುಗಳ ಜಂಟಿ ಆಶ್ರಯದಲ್ಲಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ನೈಸಿಯಾ ವಿಶ್ವಾಸದ ಘೋಷಣೆ ಒಡಬಂಡಿಕೆಯ 1700 ನೇ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಐಕ್ಯತಾ ಪ್ರಾರ್ಥನಾ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ಧರ್ಮಸಭೆ ಯಾವಾಗಲೂ ಸರ್ವ ಕ್ರೈಸ್ತ ಏಕತೆಯ ಮಹತ್ವವನ್ನು ಒತ್ತಿ ಹೇಳುತ್ತದೆ. ಎರಡನೇ ವ್ಯಾಟಿಕನ್ ಮಹಾಸಭೆಯಲ್ಲಿ ಎಲ್ಲಾ ಕ್ರೈಸ್ತರ ಏಕತೆಯನ್ನು ಪುನರ್ ಸ್ಥಾಪಿಸುವುದು ಧರ್ಮಸಭೆಯ ಪ್ರಮುಖ ಕಾಳಜಿಗಳಲ್ಲಿ ಒಂದಾಗಿದೆ ಎಂದು ಹೇಳಿದೆ. ನಿಜವಾದ ಏಕತೆ ಆತ್ಮೀಕ ಪರಿವರ್ತನೆಯಿಂದ ಆರಂಭವಾಗುತ್ತದೆ. ವಿನಯ, ಪರಸ್ಪರ ಕ್ಷಮೆ ಮತ್ತು ಒಟ್ಟಾಗಿ ಪ್ರಾರ್ಥಿಸಿದಾಗ ಮಾತ್ರ ನಿಜವಾದ ಐಕ್ಯತೆ ಕಾಣಲು ಸಾಧ್ಯವಿದೆ. ಉಡುಪಿ ಪ್ರದೇಶದ ಕ್ರೈಸ್ತ ಸಭೆಗಳು ವಿವಿಧ ಪರಂಪರೆಯ ಸುಂದರ ತಾಣವಾಗಿದ್ದು ಇಲ್ಲಿ ಒಟ್ಟಾಗಿ ಒಂದಾಗಿ ಜೀವಿಸುವುದಲ್ಲದೆ ಒಂದಾಗಿ ಪ್ರಾರ್ಥಿಸುತ್ತೇವೆ ಈ ಮೂಲಕ ವಿವಿಧತೆಯಲ್ಲಿ ಐಕ್ಯತೆಯನ್ನು ಕಂಡುಕೊಂಡಿದ್ದೇವೆ ಎಂದರು.

ಚರ್ಚ್ ಆಫ್ ಸೌತ್ ಇಂಡಿಯಾ ಕರ್ನಾಟಕ ಸದರ್ನ್ ಡಯಾಸಿಸ್ ಇದರ ಧರ್ಮಾಧ್ಯಕ್ಷರಾದ ಅತಿ|ವಂ|ಹೇಮಚಂದ್ರ ಕುಮಾರ್ ಮಾತನಾಡಿ ನೈಸಿಯಾ ವಿಶ್ವಾಸದ ಘೋಷಣೆ ಕ್ರೈಸ್ತರು ದೇವರಲ್ಲಿ ಇಟ್ಟಿರುವ ವಿಶ್ವಾಸ ಭದ್ರ ಬುನಾದಿಯಾಗಿದ್ದು 1700 ವರ್ಷಗಳ ಬಳಿಕವೂ ಕ್ರೈಸ್ತರು ಒಟ್ಟಾಗಿ ಒಂದಾಗಿ ಬದಕಲು ಪ್ರೇರೆಪಿಸುತ್ತಿದೆ. ಬೈಬಲ್ ಶ್ರೀಗ್ರಂಥದಲ್ಲಿ ಕ್ರೈಸ್ತ ಸಭೆಯನ್ನು ಯಾವ ರೀತಿಯಲ್ಲಿ ಬಲಪಡಿಸಲು ಸಾಧ್ಯ ಎನ್ನುವುದು ವಿವಿಧ ಕಡೆಯಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ಸಭೆಗಳಲ್ಲಿ ವಿಶ್ವಾಸದ ಸ್ತ್ರೋತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ನಮ್ಮಲ್ಲಿನ ಐಕ್ಯತೆಯನ್ನು ಭದ್ರಪಡಿಸಲು ಸಹಕಾರಿಯಾಗುತ್ತದೆ ಎಂದರು.

ಗೋವಾ ಡಿವೈನ್ ಸ್ಪ್ರಿಂಗ್ ಧ್ಯಾನ ಮಂದಿರದ ಮುಖ್ಯಸ್ಥರಾದ ವಂ| ರೊವಲ್ ಶುಭದೀಪ್ ಡಿಸೋಜಾ ಮತ್ತು ಕರ್ನಾಟಕ ಥಿಯೋಲೋಜಿಕಲ್ ಕಾಲೇಜು ಬಲ್ಮಠ ಮಂಗಳೂರು ಇದರ ಪ್ರಾಂಶುಪಾಲರಾದ ವಂ|ಡಾ. ಹೆಚ್ ಎಮ್ ವಾಟ್ಸನ್ ಅವರು ನೈಸಿಯಾ ವಿಶ್ವಾಸದ ಘೋಷಣೆಯ ಐತಿಹಾಸಿಕ ಚರಿತ್ರೆ ಮತ್ತು ಆಧ್ಯಾತ್ಮಿಕ ಮಹತ್ವದ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ವಂ|ಸಂತೋಷ್, ಭಗಿನಿ ಪ್ರಿಯಾ ಮತ್ತವರ ತಂಡದಿಂದ ವಿಶ್ವಾಸ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ವಂ|ಲಿಯೋ ಪ್ರವೀಣ್, ವಂ|ಪ್ರವೀಣ್ ಮಾಬೆನ್, ವಂ|ನೊಯೆಲ್ ಲೂವಿಸ್, ಪ್ರಶಾಂತ್ ಜತ್ತನ್ನ, ಸಹಿತ ರೋಮನ್ ಕ್ಯಾಥೊಲಿಕ್, ಓರ್ಥೋಡಕ್ಸ್, ಸಿಎಸ್ ಐ, ಯುಬಿಎಂ ಸಭೆಗಳ ಧರ್ಮಗುರುಗಳು, ಪಾಸ್ಟರ್ಸ್, ಧರ್ಮಭಗಿನಿಯರು ಹಾಗೂ ಭಕ್ತವೃಂದದವರು ಉಪಸ್ಥಿತರಿದ್ದರು.

ವಂ| ಸಂತೋಷ್ ಸ್ವಾಗತಿಸಿ, ಎಬನೇಜರ್ ಕ್ರಿಸ್ಟೋಫರ್ ಕರ್ಕಡ ವಂದಿಸಿದರು. ವಂ|ವಿಜಯ್ ಹಾರ್ವಿನ್ ಪ್ರಾರ್ಥಸಿದರು. ವಂ|ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.

View this post on Instagram

A post shared by News Karnataka (@newskarnataka)