ಉಡುಪಿ: ದೇವರ ಹೆಸರಿನಲ್ಲಿ ಜನರನ್ನು ವಂಚಿಸಿ ಶಾಸಕರಾಗಿರುವುದು ಇಡೀ ಜಗತ್ತಿನಲ್ಲಿ ಸುನೀಲ್ ಕುಮಾರ್ ಒಬ್ಬರೇ. ಇವರನ್ನು ಹಿಂದು ಧರ್ಮದಿಂದ ಬಹಿಷ್ಕರಿಸಬೇಕು. ಹಿಂದು ಧರ್ಮದ ಯಾವುದೇ ಕಾರ್ಯಕ್ರಮಗಳಿಗೂ ಇವರನ್ನು ಆಹ್ವಾನಿಸಬಾರದು. ಅಂತಹ ನೀಚ ಕೆಲಸವನ್ನು ಸುನೀಲ್ ಕುಮಾರ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಟೀಕಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಶುರಾಮನ ಮೂರ್ತಿ ವಿಚಾರದಲ್ಲಿ ತಪ್ಪು ಮಾಡಿದರೂ ಸಮರ್ಥನೆ ಮಾಡುತ್ತಿದ್ದವರು, ಇದೀಗ ಹೈಕೋರ್ಟ್ ಆದೇಶದ ನಂತರ ಚಕಾರ ಎತ್ತುತ್ತಿಲ್ಲ. ಯಾವುದೇ ರೀತಿಯ ತಪ್ಪು ಮಾಡಿದರೂ ಜನ ಕ್ಷಮಿಸುತ್ತಾರೆ. ಆದರೆ ದೇವರ ಹೆಸರಿನಲ್ಲಿ ನಡೆ ಸಿದ ಭ್ರಷ್ಟಾಚಾರಕ್ಕೆ ಯಾವುದೇ ಕ್ಷಮೆ ಇಲ್ಲ. ಚುನಾವಣೆ ಯಲ್ಲಿ ಗೆಲ್ಲುವ ಒಂದೇ ಉದ್ದೇಶಕ್ಕಾಗಿ ಪರಶುರಾಮನ ನಕಲಿ ಮೂರ್ತಿ ಸ್ಥಾಪಿಸುವ ಮೂಲಕ ಜನರ ನಂಬಿಕೆಯನ್ನು ಘಾಸಿಗೊಳಿಸಿದ್ದಾರೆ. ಆ ಮೂಲಕ ಶಾಸಕರು ಎಲ್ಲರಿಗೂ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕಾರ್ಕಳದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಿರ್ಮಿಸಿದ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯ್ಕ್ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕೆಂದು ಸಲ್ಲಿಸಿದ ಅರ್ಜಿ ಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ ಮೂರ್ತಿಯ ಮೇಲ್ಭಾಗವನ್ನು ಪತ್ತೆ ಹಚ್ಚಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಕಲಿ ಪರಶುರಾಮ ಮೂರ್ತಿ ನಿರ್ಮಿಸಿ ಉಡುಪಿ ಮತ್ತು ದ.ಕ. ಜಿಲ್ಲೆಯ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ. ಈ ಹಿಂದೆ ಪಾರ್ಕ್‌ನಲ್ಲಿದ್ದ ಪರಶು ರಾಮನ ಮೂರ್ತಿಯ ಮೇಲಿನ ಭಾಗವನ್ನು ರಾತ್ರೋರಾತ್ರಿ ತೆಗೆದುಕೊಂಡು ಹೋಗಿದ್ದಾರೆ. ಆದುದರಿಂದ ಆರೋಪಿ ಕೃಷ್ಣ ನಾಯ್ಕ್ ಮತ್ತು ಉಡುಪಿ ನಿರ್ಮಿತಿ ಕೇಂದ್ರದ ಇಂಜಿನಿಯರ್‌ಗಳನ್ನು ವಿಚಾರಣೆಗೆ ಒಳಪಡಿಸಿದರೆ ಮೂರ್ತಿಯ ಮೇಲಿನ ಭಾಗ ಎಲ್ಲಿದೆ ಎಂಬುದು ಬಹಿರಂಗ ಪಡಿಸಲು ಸಾಧ್ಯ ಎಂದರು.