ಉಡುಪಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಜಿಲ್ಲೆಯ ವಿವಿಧ ಭಾಗಗಳ ಹೊಳೆ, ತೊರೆ ಹಾಗೂ ಸಿಹಿನೀರಿನ ಜಲಮೂಲಗಳಲ್ಲಿ ಸಾಂಪ್ರದಾಯಿಕ ಮೀನು ಬೇಟೆ ಚಟುವಟಿಕೆಗಳು ಮತ್ತೆ ಚುರುಕುಗೊಂಡಿವೆ. ಗ್ರಾಮೀಣ ಪ್ರದೇಶಗಳ ಮೀನುಗಾರರು ಹಾಗೂ ಮೀನು ಪ್ರಿಯರು ಉಬಾರ್ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಿಧಾನಗಳ ಮೂಲಕ ಮೀನು ಹಿಡಿಯುವ ಕಾರ್ಯದಲ್ಲಿ ತೊಡಗಿದ್ದಾರೆ.
ಆದರೆ ಈ ಬಾರಿ ಮಳೆಯ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ ಹೊಳೆ-ತೊರೆಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಮೀನುಗಳ ಲಭ್ಯತೆಯೂ ಕಡಿಮೆಯಾಗಿದೆ. ಇದರಿಂದ ಉತ್ತಮ ಪ್ರಮಾಣದಲ್ಲಿ ಮೀನು ದೊರೆಯುವ ನಿರೀಕ್ಷೆಯಲ್ಲಿದ್ದ ಮೀನು ಪ್ರಿಯರಿಗೆ ನಿರಾಸೆಯಾಗಿದೆ.
ಇದರ ನಡುವೆಯೇ ಕೆಲವೆಡೆ ಮೀನುಗಾರರಿಗೆ ಉತ್ತಮ ಗಾತ್ರದ ಮೀನುಗಳು ಬಲೆಗೆ ಬೀಳುತ್ತಿವೆ. ಉಬಾರ್ ಮೀನು ಬೇಟೆ ವೇಳೆ ಬೃಹತ್ ಗಾತ್ರದ ಮುಗುಡ್ ಮೀನು ಸಿಕ್ಕಿರುವುದು ಸ್ಥಳೀಯರ ಗಮನ ಸೆಳೆದಿದೆ. ಮೀನುಗಾರರು ಹಿಡಿದ ಈ ಅಪರೂಪದ ಗಾತ್ರದ ಮುಗುಡ್ ಮೀನನ್ನು ನೋಡಲು ಸ್ಥಳೀಯರು ಆಗಮಿಸಿ ಕುತೂಹಲ ವ್ಯಕ್ತಪಡಿಸಿದರು.
ಮಳೆ ಪ್ರಮಾಣ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಹೊಳೆ ಹಾಗೂ ತೊರೆಗಳಲ್ಲಿ ಮೀನುಗಳ ಸಂಚಾರ ಹೆಚ್ಚಾಗಿ ಸಾಂಪ್ರದಾಯಿಕ ಮೀನು ಬೇಟೆಗೆ ಮತ್ತಷ್ಟು ಉತ್ತೇಜನ ದೊರೆಯುವ ನಿರೀಕ್ಷೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

