ಉಡುಪಿ: ಕರ್ನಾಟಕ ಕರಾವಳಿಯ ತುಳುನಾಡಿನಲ್ಲಿ ಇಂದಿನಿಂದ ಹೊಸ ವರ್ಷ ಆಚರಣೆ. ಸೌರಮಾನ ಪದ್ಧತಿಯಂತೆ ಕರಾವಳಿಯಾದ್ಯಂತ ಯುಗಾದಿ ಆಚರಿಸಲಾಗುತ್ತದೆ.
ಇದೇ ವೇಳೆ ಏಪ್ರಿಲ್ 14 ರಿಂದ ಆರಂಭವಾಗುವ ಹೊಸ ವರ್ಷದ ಕ್ಯಾಲೆಂಡರ್ ನ್ನು ಇದೇ ಮೊದಲ ಬಾರಿಗೆ ಜೈ ತುಳುನಾಡು ಸಂಘಟನೆಯ ಉಡುಪಿ ಘಟಕ ಬಿಡುಗಡೆ ಮಾಡಿದೆ. ತುಳು ದಿನಾಂಕಗಳು ಹಾಗೂ ಮಾಸದೊಂದಿಗೆ ನಮೂದಿಸಿದ ಈ ಕ್ಯಾಲೆಂಡರ್ ನಲ್ಲಿ ಇಂದಿನಿಂದ ಹೊಸ ವರ್ಷ ಆರಂಭವಾಗಲಿದೆ.
ಮುಂದಿನ ಯುಗಾದಿ ವರೆಗಿನ ತುಳು ತಿಂಗಳುಗಳ ಆಧಾರದಲ್ಲಿ ಕಾಲಕೋಂದೆ ಎಂಬ ಹೆಸರಿನಲ್ಲಿ ಈ ಹೊಸ ಕಲ್ಪನೆಯ ಕ್ಯಾಲೆಂಡರ್ ಬಿಡುಗಡೆಯಾಗಿದೆ. ಯುವ ಪೀಳಿಗೆಗೆ ಹಾಗೂ ತೌಳವ ಸಮಾಜಕ್ಕೆ ತಮ್ಮ ಸಂಸ್ಕಾರದ ಅರಿವು ಹಾಗೂ ತುಳು ತಿಂಗಳಿನ ಮೂಲಕ ಸಂಸ್ಕೃತಿಯ ಒಲವನ್ನು ಬೆಳೆಸಲು ಈ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ. ತುಳು ಭಾಷೆಯಲ್ಲಿ ದಿನಾಂಕ ಹಾಗೂ ಆಚರಣೆಗಳನ್ನು ನಮೂದಿಸಿರುವ ಕ್ಯಾಲೆಂಡರ್ ಗಮನ ಸೆಳೆದಿದೆ.

