ಉಡುಪಿ: ಆದಿಉಡುಪಿಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಮರಗಳನ್ನು ಕಡಿದು, ಶೆಡ್ ಹಾಗೂ ಇಂಟರ್ಲಾಕ್ಗಳನ್ನು ಧ್ವಂಸ ಮಾಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೆಯೇ ಅವರಿಗೆ ಬೆಂಬಲ ನೀಡಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆದಿಉಡುಪಿ ಎಪಿಎಂಸಿ ಹಿತ ರಕ್ಷಣಾ ವೇದಿಕೆಯ ವಿಜಯ ಕೊಡವೂರು ಆಗ್ರಹಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಮಾರುಕಟ್ಟೆಯಲ್ಲಿ ನಿರಂತರ ಅವ್ಯವಹಾರ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಮೋಸದಿಂದ ಜಾಗ ಮಾರಾಟ ಮಾಡಿದ ಸಂದರ್ಭದಲ್ಲಿಯೂ ನಾವು ಪ್ರತಿಭಟಿಸಿಕೊಂಡು ಬಂದಿದ್ದೇವೆ.
ಇದೀಗ ಎಪಿಎಂಸಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪೊಲೀಸರನ್ನು ಧಿಕ್ಕರಿಸಿ ವ್ಯಾಪಾರಿಗಳಾದ ಪ್ರಕಾಶ್ ಸಜ್ಜನ್, ಸಮಿಯುಲ್ಲಾ, ಮಹಮ್ಮದ್ ಮನ್ಸೂರ್, ಶಾಖೀಜಿ, ರುದ್ರ ಗೌಡ, ಸಂಗಮೇಶ್, ಶಂಕರ ಗೌಡ, ಶಂಕರ ಪಾಟೀಲ್ ಇವರು 50 ಜನರ ತಂಡ ಕಟ್ಟಿಕೊಂಡು ಮಾರುಕಟ್ಟಿಯಲ್ಲಿರುವ ಮರವನ್ನು ಅಕ್ರಮವಾಗಿ ಕಡಿದು, ಶೆಡ್ಗಳು ಮತ್ತು ಇಂಟರ್ಲಾಕ್ಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಕುರಿತು ಉಡುಪಿ ವಲಯ ಅರಣ್ಯ ಅಧಿಕಾರಿ, ಎಪಿಎಂಸಿ ಆಡಳಿತಾಧಿಕಾರಿ ಮತ್ತು ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಸ್ಪಂದನೆ ನೀಡಿಲ್ಲ. ಅಲ್ಲದೆ, ಘಟನೆ ನಡೆದು ಒಂದು ವಾರವಾದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಹೀಗಾಗಿ ಈ ಘಟನೆ ಅಧಿಕಾರಿಗಳ ಬೆಂಬಲದಿಂದಲೇ ನಡೆದಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ದೂರಿದರು.
ಸರಕಾರಿ ಆಸ್ತಿಪಾಸ್ತಿಗಳನ್ನು ಹಾನಿ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಬೇಕು. ಅಲ್ಲದೇ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಈ ಘಟನೆ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಸೇರಿಕೊಂಡು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಮಧುಕರ ಮುದ್ರಾಡಿ, ವೇದಾವತಿ ಹೆಗ್ಡೆ, ಫಯಾಜ್ ಅಹ್ಮದ್ ಇದ್ದರು.

