ಹೆಬ್ರಿ: ಆಗುಂಬೆ ಘಾಟಿಯ ಉಡುಪಿ ಜಿಲ್ಲಾ ವ್ಯಾಪ್ತಿಯ ಎರಡನೇ ತಿರುವಿನ ಬಳಿ ಶನಿವಾರ ಸಂಜೆ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಈ ಘಟನೆಯಿಂದಾಗಿ ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ತತ್ತರಿಸಿದ್ದ ಘಾಟಿ ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತಷ್ಟು ತೀವ್ರಗೊಂಡಿತು. ಇತ್ತೀಚಿನ ದಿನಗಳಲ್ಲಿ ಈ ಭಾಗಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ವಾಹನಗಳ ದಟ್ಟಣೆಯಿಂದಾಗಿ ಪ್ರತಿದಿನ ಇಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಘಾಟಿಯ ವಿವಿಧ ತಿರುವುಗಳಲ್ಲಿ ಹಲವು ಅಪಾಯಕಾರಿ ಮರಗಳು ರಸ್ತೆಯ ಕಡೆಗೆ ವಾಲಿ ನಿಂತಿರುವುದು ವಾಹನ ಸವಾರರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮುಂಬರುವ ದಿನಗಳಲ್ಲಿ ಭಾರಿ ಗಾಳಿ-ಮಳೆಗೆ ಈ ಮರಗಳು ರಸ್ತೆಗೆ ಉರುಳುವ ಸಾಧ್ಯತೆ ಹೆಚ್ಚಾಗಿದೆ. ಇದಲ್ಲದೆ, ಘಾಟಿ ರಸ್ತೆಯುದ್ದಕ್ಕೂ ಬಿದ್ದಿರುವ ತಡೆಗೋಡೆಗಳ ದುರಸ್ತಿ ಕಾರ್ಯವೂ ಇನ್ನೂ ನಡೆದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.