ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠ ಮತ್ತೊಂದು ಪರ್ಯಾಯೋತ್ಸವಕ್ಕೆ ಸಿದ್ಧವಾಗುತ್ತಿದೆ. ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರು ಅತ್ಯಂತ ಎಳೆಯ ಪ್ರಾಯದಲ್ಲಿ ಸರ್ವಜ್ಞ ಪೀಠ ಆರೋಹಣ ಮಾಡಲಿದ್ದಾರೆ. ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಸಾಂಪ್ರದಾಯಿಕ ಧಾನ್ಯ ಮುಹೂರ್ತ ಭಾನುವಾರ ಜರುಗಿತು.
ಉಡುಪಿಯ ಕೃಷ್ಣದೇವರನ್ನು ಅನ್ನ ಬ್ರಹ್ಮ ಎಂದು ಕರೆಯುತ್ತಾರೆ. ಇಲ್ಲಿ ಕೃಷ್ಣದೇವರಿಗೆ ಪ್ರತಿ ದಿನ ಶೋಢಶೋಪಚಾರ ಪೂಜೆಯೊಂದಿಗೆ ಹತ್ತಾರು ಬಗೆಯ ಖಾದ್ಯಗಳ ನೈವೇದ್ಯ ನಡೆದರೆ, ಮತ್ತೊಂದೆಡೆ ಭಕ್ತರಿಗೆ ದೇವರ ನೈವೇದ್ಯ ಅನ್ನಪ್ರಸಾದದ ರೂಪದಲ್ಲಿ ವಿತರಣೆಯಾಗುತ್ತದೆ. ಇಲ್ಲಿ ನಡೆಯುವ ಅನ್ನದಾಸೋಹದಲ್ಲಿ ಲಕ್ಷಾಂತರ ಜನ ಪ್ರಸಾದ ಸ್ವೀಕರಿಸುತ್ತಾರೆ.
ಹಾಗಾಗಿ ಕೃಷ್ಣನ ಪೂಜೆಯನ್ನು ಅನ್ನ ಬ್ರಹ್ಮನ ಪೂಜೆಯೆಂದು ಕರೆಯಲಾಗುತ್ತದೆ. ಜನವರಿ 18ರಂದು ನಡೆಯಲಿರುವ ಶಿರೂರು ಮಠದ ಪರ್ಯಾಯಕ್ಕೆ ಧಾನ್ಯ ಸಂಗ್ರಹಿಸುವ ಮುಹೂರ್ತ ಇಂದು ನಡೆಯಿತು. ಈ ಮೊದಲು ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಗಳು ನಡೆದಿದ್ದವು. ಎಲ್ಲಾ ಮುಹೂರ್ತಗಳ ಉದ್ದೇಶ, ಎರಡು ವರ್ಷಗಳ ಕಾಲ ಭಕ್ತರ ಉಟೊಪಚಾರಕ್ಕೆ ಸಿದ್ಧತೆ ನಡೆಸುವುದೇ ಆಗಿದೆ.
ಧಾನ್ಯ ಮುಹೂರ್ತದ ಪ್ರಯುಕ್ತ, ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಕೃಷ್ಣದೇವರು ಅನಂತೇಶ್ವರ, ಚಂದ್ರಮೌಳೇಶ್ವರ ದೇವರ ದರ್ಶನದ ಬಳಿಕ, ನೂರಾರು ಭಕ್ತರು ತಲೆಯಲ್ಲಿ ಅಕ್ಕಿಯ ಮುಡಿಯನ್ನು ಹೊತ್ತು ನಡೆದರು. ಧಾನ್ಯವನ್ನು ಸಂಗ್ರಹಿಸುವ ಪ್ರತಿರೂಪದಂತೆ, ಈ ಅಕ್ಕಿ ಮುಡಿಯ ಮೆರವಣಿಗೆ ಅಷ್ಟಮಠಗಳ ರಥಬೀದಿಯಲ್ಲಿ ಜರುಗಿತು.
ವಾದ್ಯ ಮೇಳಗಳೊಂದಿಗೆ ಸಾಗಿದ ಈ ಮೆರವಣಿಗೆ, ಕೃಷ್ಣ ಮಠ ಪ್ರವೇಶಿಸಿತು. ಕೃಷ್ಣದೇವರ ಆಡಳಿತ ಕಚೇರಿ ಇರುವ ಬಡಗು ಮಾಳಿಗೆಯಲ್ಲಿ, ಅಕ್ಕಿಯ ಮುಡಿಗಳನ್ನಿಟ್ಟು ಪೂಜಿಸಲಾಯಿತು. ಕಟ್ಟಿಗೆಗಳನ್ನು ಸಾಂಪ್ರದಾಯಿಕವಾಗಿ ಜೋಡಿಸಿ ರಥ ನಿರ್ಮಿಸುವುದು ಉಡುಪಿಯ ಸಂಪ್ರದಾಯ. ಈ ರೀತಿ ನಿರ್ಮಿಸಲಾದ ಕಟ್ಟಿಗೆ ರಥಕ್ಕೆ ಇಂದು ಶಿಖರ ಪ್ರತಿಷ್ಠೆ ನಡೆಯಿತು.
ಶಿರೂರು ಶ್ರೀ ಲಕ್ಷ್ಮೀವರ ತೀರ್ಥರ, ಅನಿರೀಕ್ಷಿತ ಸಾವಿನ ನಂತರ, ಮಠದಲ್ಲಿ ಅನೇಕ ಗೊಂದಲಗಳು ವಿವಾದಗಳು ಏರ್ಪಟ್ಟಿತ್ತು. ಇದೀಗ ಶಿರೂರು ಮಠಕ್ಕೆ ಪೀಠಾಧಿಕಾರಿಯಾಗಿ ಬಂದಿರುವ ಶ್ರೀ ವೇದವರ್ಧನ ತೀರ್ಥರು, ತಮ್ಮ ಅತ್ಯಂತ ಎಳೆಯ ಪ್ರಾಯದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುತ್ತಿರುವುದು ವಿಶೇಷವೆನಿಸಿದೆ.
