ಉಡುಪಿ: ಕೇರಳ ಹಾಗೂ ಬೆಂಗಳೂರಿನ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೂವರು ನಕಲ್ಸರನ್ನು ಕುಂದಾಪುರದ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಶಂಕರನಾರಾಯಣ, ಅಮಾಸೆಬೈಲು ಹಾಗೂ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ನಕ್ಸಲ್ ಚಟುವಟಿಕೆ ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಖುದ್ದು ಹಾಜರುಪಡಿಸಲು ನ್ಯಾಯಾಲಯದ ಸೂಚನೆಯ ಹಿನ್ನೆಲೆಯಲ್ಲಿ ಹಾಜರು ಪಡಿಸಲಾಯಿತು.
ಕೇರಳದ ವಿಯೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಹಾಗೂ ಬೆಂಗಳೂರಿನ ಜೈಲಿನಲ್ಲಿರುವ ವನಜಾಕ್ಷೀ ಇವರುಗಳನ್ನು ಬಾಡಿ ವಾರೆಂಟ್ ಪಡೆದು ಕುಂದಾಪುರ ದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಅವರ ಎದುರು ಹಾಜರುಪಡಿಸಲಾಯಿತು.
ನ್ಯಾಯಾಂಗ ಬಂಧನದಲ್ಲಿರುವ ಇವರಿಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಇರುವ ಪ್ರಕರಣಗಳ ವಿಚಾರಣೆಗಳು ನ್ಯಾಯಾಲಯ ಗಳಲ್ಲಿ ನಡೆಯುತ್ತಿದ್ದು, ಕುಂದಾಪುರ ಉಪ ವಿಭಾಗ ವ್ಯಾಪ್ತಿಯಲ್ಲಿರುವ ಪ್ರಕರಣಗಳ ಕುರಿತ ದೋಷಾರೋಪಣೆಗಳ ಪ್ರಕ್ರಿಯೆ ನಡೆಸಿದ್ದು, ಪ್ರಕರಣಗಳ ವಿಚಾರಣೆಗಾಗಿ ಪ್ರಾಸಿಕ್ಯೂಶನ್ಗೆ ಮುಂದಿನ ದಿನಾಂಕ ನಿಗದಿಪಡಿಸಿ ನ್ಯಾಯಾಲಯ ಆದೇಶಿಸಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಈಗ ಜೈಲಿನಲ್ಲಿರುವ ತೊಂಬಟ್ಟು ಲಕ್ಷ್ಮೀ, ಕನ್ಯಾಕುಮಾರಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರೆ, ಈಗಾಗಲೇ ಜಾಮೀನು ಪಡೆದು ಹೊರಗಿರುವ ನೀಲಗುಳಿ ಪದ್ಮನಾಭ ಕೂಡ ವಿಚಾರಣೆ ವೇಳೆ ಖುದ್ದು ಹಾಜರಿದ್ದರೆಂದು ತಿಳಿದುಬಂದಿದೆ.

