ಉಡುಪಿ: ಸಾರ್ವಜನಿಕ ಅಹವಾಲು ಸಂದರ್ಭದಲ್ಲಿ ಉಡುಪಿಯ ಜನತೆ ಹಾಗೂ ಬಿಜೆಪಿಗೆ ಸೌಹಾರ್ದತೆಯ ಪಾಠ ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪೇಚಿಗೆ ಸಿಲುಕಿದ್ದಾರೆ. ವೃದ್ಧ ಹಿಂದೂ ಮಹಿಳೆಯೊಬ್ಬರ ಜಾಗದ ಸಮಸ್ಯೆಗೆ ಮುಸ್ಲಿಂ ಮಹಿಳೆಯರು ಕಣ್ಣೀರು ಹಾಕಿ ಬೇಡಿಕೊಂಡ ಪ್ರಕರಣ, ಬೇರೆಯದೇ ಆಯಾಮ ಪಡೆದಿದೆ.
ಅದೊಂದು ಬಾವುಕ ಕ್ಷಣವಾಗಿತ್ತು. ಬಹಳ ಸಮಯದ ನಂತರ ಉಡುಪಿಗೆ ಭೇಟಿ ಕೊಟ್ಟಿದ್ದ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಾರ್ವಜನಿಕ ಅಹವಾಲು ಸ್ವೀಕರಿಸುತ್ತಿದ್ದರು. ಈ ವೇಳೆ ವೃದ್ಧ ಹಿಂದೂ ಮಹಿಳೆಯೊಬ್ಬರ ಭೂಮಿಯ ಸಮಸ್ಯೆ ಕುರಿತು ಇಬ್ಬರು ಮುಸ್ಲಿಂ ಮಹಿಳೆಯರು ಸಚಿವೆಯ ಗಮನ ಸೆಳೆದರು.

ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರು, 80 ಬಡಗುಬೆಟ್ಟು ಗ್ರಾಮದಲ್ಲಿ, ಐದು ಸೆಂಟ್ಸ್ ಭೂಮಿಯ ದಾಖಲೆ ಸಮಸ್ಯೆಯಿಂದ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ವೃದ್ಧ ಹಿಂದೂ ಮಹಿಳೆಯ ಸಂಕಷ್ಟವನ್ನು ಹೇಳಿ ಕಣ್ಣೀರು ಹಾಕಿದ್ದರು, ಇದರಿಂದ ರೋಮಾಂಚನಗೊಂಡ ಸಚಿವೆ, ಇಲ್ಲಿ ನೋಡಿ ಉಡುಪಿ ಬಿಜೆಪಿಯ ಜನ ಸೌಹಾರ್ದತೆಯನ್ನು ಇವರಿಂದ ಕಲಿಯಬೇಕು, ಎಂದು ಬುದ್ಧಿವಾದ ಹೇಳಿದ್ದರು.
ಇದೀಗ ಈ ಘಟನೆ ಸಚಿವೆಯನ್ನೇ ಪೆಚೆಗೆ ಸಿಲುಕಿಸಿದೆ. ವಾಸ್ತವದಲ್ಲಿ ಬುರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆ ಬೇರ್ಯಾರು ಅಲ್ಲ ವೃದ್ಧ ಹಿಂದೂ ಮಹಿಳೆಯ ಮಗಳು ಅನ್ನೋದನ್ನ ಬಿಜೆಪಿ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಎರಡು ದಶಕದ ಹಿಂದೆ ಮತಾಂತರಗೊಂಡಿರುವ ಮಗಳು ತನ್ನ ತಾಯಿಯ ಸಮಸ್ಯೆಯನ್ನೇ ಹೇಳಿಕೊಂಡು ಬಂದಿರುವುದು ಗೊತ್ತಾಗಿದೆ. ಸಮಸ್ಯೆ ಹೇಳಿಕೊಳ್ಳುವ ವೇಳೆ ತಾನು ಆಕೆಯ ನೇಬರ್ ಎಂದು ಮುಸ್ಲಿಂ ಮಹಿಳೆ ಗುರುತಿಸಿಕೊಂಡಿದ್ದರು. ಆಕೆಯ ಜೊತೆ ಇನ್ನೊಬ್ಬ ಸ್ನೇಹಿತೆಯೂ ಇದ್ದರು. ವಿಷಯದ ಅರಿವಿಲ್ಲದೆ, ಆತುರವಾಗಿ ವರ್ತಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಸಚಿವರೇ ನಮಗೆ ನಿಮ್ಮ ಸೌಹಾರ್ದತೆಯ ಪಾಠದ ಅಗತ್ಯವಿಲ್ಲ. ಬುರ್ಖಾಧಾರಿ ಮಹಿಳೆಯರು ಸ್ವಂತ ತಾಯಿಯನ್ನೇ ನೆರೆಮನೆಯವರು ಎಂದು ಪರಿಚಯಿಸಿದರೂ ಸಚಿವೆಗೆ ಅರಿವಿಗೆ ಬಂದಿಲ್ಲ. ಬುರ್ಖಾ ಧರಿಸಿದ್ದ ಮಹಿಳೆಯರು ಸಚಿವೆಯನ್ನೇ ಯಾಮಾರಿಸಿದ್ದಾರೆ ಸ್ವಂತ ತಾಯಿಯನ್ನು ಈ ರೀತಿ ಪರಿಚಯಿಸಿರುವುದು ಅಕ್ಷಮ್ಯ, ಜಿಲ್ಲೆಗೆ ಅತಿಥಿಯಾಗಿ ಬರುವ ಉಸ್ತುವಾರಿ ಸಚಿವರಿಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳಲು ಯಾಕೆ ತರಾತುರಿ ಎಂದು ಪ್ರಶ್ನಿಸಿದ್ದಾರೆ, ದಿಕ್ಕು ತಪ್ಪಿಸಿದ ಈ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗುರುತು ಮರೆಮಾಚಿ, ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯರ ಬಗ್ಗೆ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಮುಗಿಬಿದ್ದು ಹರಿಹಾಯುತಿದ್ದಾರೆ. ಇನ್ನೊಂದೆಡೆ ಕರಾವಳಿ ಜನರಿಗೆ ಸೌಹಾರ್ದತೆಯ ಪಾಠ ಮಾಡಲು ಬಂದ ಸಚಿವೆ ಮುಜುಗರ ಎದುರಿಸುವಂತೆ ಆಗಿದೆ.

