ಉಡುಪಿ: ಶೀರೂರು ಪರ್ಯಾಯ ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಅವರು ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ವತಿಯಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಆಯೋಜಿಸಲಾದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬಳಿಕ ಮಾತನಾಡಿದ ಅವರು, ಎಲ್ಲರನ್ನೂ ಒಗ್ಗೂಡಿಸಿಕೊಂಡು ದೇಶ ಕಟ್ಟುವ ಕಾರ್ಯ ಮಾಡಬೇಕಾಗಿದೆ. ಶೀರೂರು ಮಠದ ಹಿಂದಿನ ಸ್ವಾಮೀಜಿ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ, ಆಸ್ಕರ್ ಫೆರ್ನಾಂಡಿಸ್ ಅವರು ಸಮಾಜ ಸೇವೆಗೆ ಹೆಚ್ಚಿನ ಒತ್ತು ನೀಡಿ ಈ ಮೂಲಕ ಜನರ ಮನಸ್ಸುಗಳನ್ನು ಗೆದ್ದಿದ್ದರು.
ಸಮಾಜ ಸೇವೆಗೆ ಪ್ರತಿಯೊಬ್ಬರು ಒತ್ತು ಕೊಡುವುದರ ಮೂಲಕ ಸಮೃದ್ಧ ಭಾರತದ ಕನಸನ್ನು ನನಸು ಮಾಡುವ ಕೆಲಸ ನಡೆಯಬೇಕು. ತಮ್ಮ ಪರ್ಯಾಯದ ಅವಧಿಯಲ್ಲಿ ಇದು ನಮ್ಮ ಪರ್ಯಾಯ ಎಂಬಂತೆ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಆಸ್ಕರ್ ಅಭಿಮಾನಿ ಬಳಗದ ಯತೀಶ್ ಕರ್ಕೆರಾ, ಮುರಳಿ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ವಿಶ್ವಾಸ್ ಅಮೀನ್, ನವೀನ್ ಸಾಲಿಯಾನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಮೊದಲಾದವರು ಉಪಸ್ಥಿತರಿದ್ದರು.
ಬೆಳಗ್ಗೆ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್ ಉದ್ಘಾಟಿಸಿದರು. ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ದಿನಕರ ಹೇರೂರು, ಎರ್ಮಾಳ್ ಶಶಿಧರ್ ಶೆಟ್ಟಿ, ಫಾದರ್ ವಿಲಿಯಂ ಮಾರ್ಟಿಸ್ ಮೊದಲಾದವರು ಉಪಸ್ಥಿತರಿದ್ದರು.
ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ವಿವಿಧ ತಾಲೂಕು ಗಳಿಂದ ಭಜನಾ ತಂಡಗಳು ಕುಣಿತ ಭಜನೆಯನ್ನು ಪ್ರದರ್ಶಿಸಿದರು, ಮಧ್ಯಾಹ್ನ ರಾಜ್ಯ ಮಟ್ಟದ ಭಕ್ತಿ ಪ್ರಧಾನ ನೃತ್ಯ ಸ್ಪರ್ಧೆ ನಡೆಯಿತು.

