ಉಡುಪಿ: ಕರಾವಳಿಯನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಕರಾವಳಿ ಭಾಗಕ್ಕೆ 19,500 ಕೋಟಿ ರೂಪಾಯಿ ಕೊಟ್ಟಿದ್ದರು. ಸಿದ್ದರಾಮಯ್ಯ ಸರ್ಕಾರ ಅನುದಾನವೇ ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದರು.

ರಾಜ್ಯದ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡ, ಉಡುಪಿ‌ ಜಿಲ್ಲೆಗೆ ಬರುವುದೇ ಇಲ್ಲ. ಕರಾವಳಿಗೆ ರಾಜ್ಯ ಸರ್ಕಾರ ತಾರತಮ್ಯ ಮಾಡಿದೆ. ಯಾವುದೇ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ. ಸಿದ್ದರಾಮಯ್ಯ ಬೆಂಗಳೂರಿನ ಮುಖ್ಯಮಂತ್ರಿಯೋ, ರಾಜ್ಯದ ಮುಖ್ಯಮಂತ್ರಿಯೋ ತಿಳಿಯುತ್ತಿಲ್ಲ. ಬಸವ ರಾಯರೆಡ್ಡಿ ಸತ್ಯವನ್ನೇ ಹೇಳಿದ್ದಾರೆ.

ದಿಟ್ಟವಾಗಿ ನೇರವಾಗಿ ಮಾತನಾಡುವ ಸ್ವಭಾವ ಅವರದು, ವಾಲ್ಮೀಕಿ ನಿಗಮದ ನೂರಾರು ಕೋಟಿ ಹಗರಣ, ಮೂಡ ಹಗರಣ ಆದ ನಂತರ ಅವರು ಬೇಸತ್ತಿದ್ದಾರೆ. ಅಭಿವೃದ್ಧಿಗೆ ಯಾವುದೇ ಹಣ ನೀಡುತ್ತಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಗುಜರಾತ್ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿ ಇತ್ತು. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನಕ್ಕೆ ತಲುಪಿದೆ.

ಅದರ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಖರ್ಗೆಗೆ ಅವಮಾನ ಮಾಡಿದ ವಿಚಾರವಾಗಿ ದಲಿತರಿಗೆ ಕಾಂಗ್ರೆಸ್ ಅನ್ಯಾಯ ಮಾಡಿಕೊಂಡು ಬಂದಿದೆ. ಅಂಬೇಡ್ಕರ್ ಗಾಂಧೀಜಿ ಬಗ್ಗೆ ಅವರ ಕಳಕಳಿ ಏನು ಅನ್ನೋದು ಬಹಿರಂಗ ಆಗಿದೆ. ದಲಿತರ ಪರವಾಗಿ ನರೇಂದ್ರ ಮೋದಿ ಯೋಜನೆ ನೀಡುತ್ತಿದ್ದಾರೆ ಕಾಂಗ್ರೆಸ್ ಅಲ್ಲ ಎಂದರು.