ಉಡುಪಿ: ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ದ್ವಿತೀಯ ಸತ್ರ ನ್ಯಾಯಾಧೀಶ ಎ. ಸಮೀಉಲ್ಲಾ ಎಂದು ಹೇಳಿದರು.
ಅವರು ಮಂಗಳವಾರ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿಯ ಚಂದು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿ ಮಾತನಾಡಿದರು.
ಹಗಲು-ರಾತ್ರಿ ಎನ್ನದೇ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ಪೊಲೀಸ್ ಸಿಬ್ಬಂದಿ ಸದಾ ಕಾರ್ಯನಿರತರಾಗಿರುತ್ತಾರೆ. ಪೊಲೀಸರು ಕೇವಲ ಅಪರಾಧ ಪ್ರಕರಣಗಳನ್ನು ತಡೆಯುವುದು ಮಾತ್ರವಲ್ಲ ಪ್ರಾಕೃತಿಕ ವಿಕೋಪ, ಕೋವಿಡ್ ಸಂದರ್ಭದಲ್ಲಿ ಪೊಲೀಸರು ನಿರ್ವಹಿಸಿದ ಸೇವೆ ಅನನ್ಯವಾದುದು. ಇಂದು ನಾವು ನೆಮ್ಮದಿಯ ಜೀವನ ನಡೆಸಲು ಪೊಲೀಸರ ಸೇವೆ ಕಾರಣವಾಗಿದೆ ಅಂತಹ ಪೊಲೀಸ್ ಸಿಬಂದಿಗಳ ಬಗ್ಗೆ ಸಮಾಜ ಸದಾ ಗೌರವ ಭಾವ ಹೊಂದಿರಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು, ದೇಶದಲ್ಲಿ ಒಂದು ವರ್ಷದಲ್ಲಿ 191 ಪೊಲೀಸರು ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಮೃತಪಟ್ಟಿದ್ದು ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಪುಷ್ಪಾಲಂಕೃತ ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಪೋಲಿಸ್ ಸಿಬ್ಬಂದಿ, ಸಾರ್ವಜನಿಕ ಗಣ್ಯರು, ಮಾಧ್ಯಮ ಪ್ರತಿನಿಧಿಗಳು ಗೌರವ ಸಲ್ಲಿಸಿದರು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಹುತಾತ್ಮರಿಗೆ ಗೌರವ ಸಮರ್ಪಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ ಎಸ್ ನಾಯಕ್, ಎ ಎಸ್ಪಿ ಕಾರ್ಕಳ ಹರ್ಷ ಪ್ರಿಯಂವದಾ, ಕುಂದಾಪುರ ಡಿವೈಎಸ್ಪಿ ಎಚ್ ಡಿ ಕುಲಕರ್ಣಿ, ಉಡುಪಿ ಡಿವೈಎಸ್ಪಿ ಪ್ರಭು ಡಿಟಿ ಉಪಸ್ಥಿತರಿದ್ದರು.

